ಅಪ್ರಾಪ್ತ ಶೂಟರ್ ಒಬ್ಬರು ಮಾಡಿದ ಲೈಂಗಿಕ ಕಿರುಕುಳದ ಆರೋಪದ ಮೇಲೆ, ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ರಾಷ್ಟ್ರೀಯ ಶೂಟಿಂಗ್ ಕೋಚ್ ಅಂಕುಶ್ ಭಾರದ್ವಾಜ್ ಅವರನ್ನು ಅಮಾನತುಗೊಳಿಸಿದೆ.
17ವರ್ಷದ ಅಪ್ರಾಪ್ತ ಶೂಟರ್ ಒಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ ಹಿನ್ನೆಲೆ ಭಾರತದ ಶೂಟಿಂಗ್ ತರಬೇತಿ ಸಿಬ್ಬಂದಿಯ ಸದಸ್ಯ ಅಂಕುಶ್ ಭಾರದ್ವಾಜ್ ಅವರನ್ನು ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ)ದಿಂದ ಅಮಾನತುಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರದ್ವಾಜ್ ವಿರುದ್ಧ ಹರ್ಯಾಣದ ಫರಿದಾಬಾದ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎನ್‌ಆರ್‌ಎಐ ದೃಢಪಡಿಸಿದೆ. ಅಪ್ರಾಪ್ತ ಶೂಟರ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ ಹಿನ್ನೆಲೇ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಅವರನ್ನು ಅಮಾನತು ಮಾಡಲಾಗಿದ್ದು ಅವರಿಗೆ ಶೋಕಾಸ್ ನೊಟೀಸ್ ನೀಡಲಾಗಿದೆ ಎಂದು ಎನ್‌ಆರ್‌ಎಐ ಕಾರ್ಯದರ್ಶಿ ರಾಜೀವ್ ಭಾಟಿಯಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ನೈತಿಕ ಆಧಾರದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ. ಈಗ ಅವರು ತಮ್ಮನ್ನು ತಾವು ನಿರಪರಾಧಿ ಎಂದು ಸಾಬೀತುಪಡಿಸಿಕೊಳ್ಳಬೇಕು. ಅವರ ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರಿಗೂ ಯಾವುದೇ ಶೂಟರ್ ತರಬೇತಿ ಚಟುವಟಿಕೆಗೂ ಸಂಬಂಧ ಇರುವುದಿಲ್ಲ ಎಂದು ರಾಜೀವ್ ಭಾಟಿಯಾ ಅವರು ಹೇಳಿದ್ದಾರೆ. 2024 ರ ಪ್ಯಾರಿಸ್ ಒಲಿಂಪಿಕ್ಸ್ ನಂತರ 37 ಜನರ ರಾಷ್ಟ್ರೀಯ ಶೂಟರ್ ಕೋಚಿಂಗ್ ತಂಡದಲ್ಲಿ ಸ್ಥಾನ ಪಡೆಯಲು ಭಾರದ್ವಾಜ್ ಅವರನ್ನು ಎನ್‌ಆರ್‌ಐಎ ಶಿಫಾರಸು ಮಾಡಿತ್ತು. ಎನ್‌ಆರ್‌ಎಐ ಶಿಫಾರಸಿನ ಮೇರೆಗೆ ಶೂಟರ್ ಅಸೋಸಿಯೇಷನ್ ಆಫ್ ಇಂಡಿಯಾ ಅವರನ್ನು ತರಬೇತುದಾರರಲ್ಲಿ ಒಬ್ಬರನ್ನಾಗಿ ನೇಮಿಸಿತು. ಆದರೆ ಅವರ ವಿರುದ್ಧ ಈಗ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಹರ್ಯಾಣದ ಫರಿದಾಬಾದ್‌ನ ಸೂರಜ್‌ಕುಂಡ್‌ನಲ್ಲಿ ನಡೆದ ಲೈಂಗಿಕ ಕಿರುಕುಳದ ಘಟನೆಯಲ್ಲಿ ಅವರ ವಿರುದ್ಧ ಆರೋಪ ಕೇಳಿ ಬಂದಿದೆ ಎಂದು ಭಾಟಿಯಾ ಹೇಳಿದ್ದಾರೆ.
ಇದನ್ನೂ ಓದಿ: ಟೀನೇಜ್ ಪ್ರೀತಿಗೆ ವೃದ್ಧಾಪ್ಯದಲ್ಲಿ ಮದುವೆಯ ಮುದ್ರೆ: ಗಂಡ ಹೆಂಡತಿ ಸಾವಿನ ನಂತರ ಮದುವೆಯಾದ ಪ್ರೇಮಿಗಳು
ಘಟನೆ ಯಾವಾಗ ನಡೆಯಿತು ಎಂಬುದರ ಬಗ್ಗೆ ಕಾರ್ಯದರ್ಶಿ ರಾಜೀವ್ ಭಾಟಿಯಾ ಸ್ಪಷ್ಟಪಡಿಸಿಲ್ಲ. ಆದರೂ, ಸಂತ್ರಸ್ತೆ ಘಟನೆಗೆ ಸಂಬಂಧಿಸಿದಂತೆ ದಾಖಲಿಸಿದ ಎಫ್‌ಐಆರ್‌ನಲ್ಲಿ ಕಳೆದ ತಿಂಗಳು ಕರ್ಣಿ ಸಿಂಗ್ ಶ್ರೇಣಿಯಲ್ಲಿ ತರಬೇತಿ ಅವಧಿಯಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಿಂದ ಅಂಕುಶ್ ಭಾರದ್ವಾಜ್ ಬಳಿ ಈ ಬಾಲಕಿ ತರಬೇತಿ ಪಡೆಯುತ್ತಿದ್ದಾಳೆ. ಘಟನೆಯಿಂದ ತನಗೆ ಆಘಾತವಾಗಿದೆ ಎಂದು ಆಕೆ ಹೇಳಿದ್ದಾಳೆ. ನಿರಂತರ ತನಿಖೆಯ ನಂತರ ಜನವರಿ 1 ರಂದು ಈ ವಿಚಾರದ ಬಗ್ಗೆ ತನ್ನ ತಾಯಿಯ ಮುಂದೆ ಹೇಳಿದ್ದಾಗಿ ಬಾಲಕಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾಳೆ.
ಇದನ್ನೂ ಓದಿ: ವೃದ್ಧನ ನಿಸ್ವಾರ್ಥ ಸೇವೆ: ಪಂಜಾಬ್‌ನ ಬರ್ನಾಲಾ ರೈಲು ನಿಲ್ದಾಣ ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಪ್ರಯಾಣಿಕರು
ಅಮಾನತಾದ ಅಂಕುಶ್ ಭಾರದ್ವಾಜ್ ಮಾಜಿ ಪಿಸ್ತೂಲ್ ಶೂಟರ್ ಆಗಿದ್ದಾರೆ. 2010 ರಲ್ಲಿ ಅವರು ಬೀಟಾ ಬ್ಲಾಕರ್ ಬಳಸಿದ್ದಕ್ಕಾಗಿ ಡೋಪಿಂಗ್ ನಿಷೇಧವನ್ನು ಅನುಭವಿಸಿದ್ದರು.


