ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಂಡಮಾರುತ ಮತ್ತು ಮಳೆಯಿಂದ ಉಂಟಾದ ಹಾನಿಯನ್ನು ಅಂದಾಜಿಸಲಾಗುತ್ತಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೀಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ

ಜೈಪುರ (ಮೇ 28, 2023): ರಾಜಸ್ಥಾನದ ಮರುಭೂಮಿ ಪ್ರದೇಶಗಳಲ್ಲಿ ಕಳೆದ 2 ದಿನಗಳಿಂದ ಗುಡುಗು ಸಿಡಿಲು ಹಾಗೂ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ರಾಜ್ಯದ ವಿವಿಧೆಡೆ ಒಟ್ಟು 13 ಜನರು ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಗಂಟೆಗೆ 96 ಕಿ.ಮೀ ವೇಗದಲಲ್ಲಿ ಗಾಳಿ ಬೀಸುತ್ತಿದ್ದು ಹಲವೆಡೆ ಮನೆಗಳು, ವಿದ್ಯುತ್‌ ಕಂಬಗಳು ಮತ್ತು ಮರಗಳು ಧರೆಗುರುಳಿವೆ.

ರಾಜ್ಯದ ಟೋಂಕ್‌ ಒಂದರಲ್ಲೇ 10, ಅಲ್ವಾರ್‌, ಜೈಪುರ ಹಾಗೂ ಬಿಕಾನೆರ್‌ ನಗರಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಧಾರಾಕಾರ ಮಳೆಯಿಂದ ಗುರುವಾರ ರಾತ್ರಿ ಜೈಪುರದಲ್ಲಿ 17.3 ಡಿಗ್ರಿ ತಾಪಮಾನ ದಾಖಲಾಗಿದ್ದು, ಕಳೆದ 50 ವರ್ಷಗಳಲ್ಲೇ ಜೈಪುರದಲ್ಲಿ ದಾಖಲಾದ ಕನಿಷ್ಠ ತಾಪಮಾನ ಇದಾಗಿದೆ.

ಇದನ್ನು ಓದಿ: ರೈತರಿಗೆ ಶಾಕಿಂಗ್ ನ್ಯೂಸ್‌: ಜೂನ್‌ನಲ್ಲಿ ಕಡಿಮೆ ಮಳೆ ಸಾಧ್ಯತೆ; ಹವಾಮಾನ ಇಲಾಖೆ

ಇನ್ನು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಂಡಮಾರುತ ಮತ್ತು ಮಳೆಯಿಂದ ಉಂಟಾದ ಹಾನಿಯನ್ನು ಅಂದಾಜಿಸಲಾಗುತ್ತಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೀಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. "ರಾಜ್ಯ ಸರ್ಕಾರವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಿದೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಿಲ್ವಾರದ ಮಂಡಲ್‌ನಲ್ಲಿ 11 ಸೆಂ.ಮೀ ಮಳೆ ದಾಖಲಾಗಿದ್ದರೆ, ಹನುಮಾನ್‌ಗಢದ ರಾವತ್ಸರ್‌ನಲ್ಲಿ 6 ಸೆಂ.ಮೀ, ಲಕ್ಷ್ಮಣಗಢ ಮತ್ತು ಸಿಕಾರ್‌ನ ಫತೇಪುರ್‌ನಲ್ಲಿ ತಲಾ 5 ಸೆಂ. ಮೀ., ಚುರುವಿನ ತಾರಾನಗರ, ಅಲ್ವಾರ್‌ನ ತನಗಾಜಿ, ಶ್ರೀಗಂಗಾನಗರದ ಕರಣ್‌ಪುರದಲ್ಲಿ, ಹನುಮಾನ್‌ಗಢ್‌ನ ನೋಹರ್, ಚುರುವಿನ ರತನ್‌ಗಢ ತಲಾ 4 ಸೆಂ.ಮೀ ಮಳೆಯಾಗಿದೆ. ಮತ್ತು ರಾಜ್‌ಗಢ್, ಸಿಕರ್‌, ಉದಯಪುರವತಿ ಮತ್ತು ಜುಂಜುನುವಿನ ಚಿರಾವಾ, ಭಿಲ್ವಾರದ ಬನೇರಾ, ಅಜ್ಮೀರ್‌ನ ತತ್‌ಗಢದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಈ ಅವಧಿಯಲ್ಲಿ ವಿವಿಧ ಸ್ಥಳಗಳಲ್ಲಿ 1 ರಿಂದ 3 ಸೆಂ.ಮೀ ವರೆಗಿನ ಮಳೆ ದಾಖಲಾಗಿದೆ.

ಇದನ್ನೂ ಓದಿ: ರೈತರಿಗೆ ಶುಭ ಸುದ್ದಿ: ಈ ವರ್ಷ ಸಹಜ ಮುಂಗಾರು; ‘ಎಲ್‌ ನಿನೋ’ ಪರಿಣಾಮ ಇಲ್ಲ ಎಂದ ಹವಾಮಾನ ಇಲಾಖೆ

ಈ ಮಧ್ಯೆ, ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಮುಂಗಾರು ಋತುವಿನಲ್ಲಿ ಸರಾಸರಿ 96 ರಷ್ಟು ಮಳೆಯೊಂದಿಗೆ ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಉಳಿಯುತ್ತದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಜೂನ್‌ನಲ್ಲಿ ರಾಜಸ್ಥಾನದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದೂ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: MSP Rise: ರೈತರಿಗೆ ಗುಡ್‌ ನ್ಯೂಸ್‌; ಗೋಧಿ ಸೇರಿ 6 ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ