MSP Rise: ರೈತರಿಗೆ ಗುಡ್ ನ್ಯೂಸ್; ಗೋಧಿ ಸೇರಿ 6 ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ
ಗೋಧಿ ಸೇರಿ 6 ಹಿಂಗಾರು ಬೆಳೆಗಳ ಬೆಂಬಲ ಬೆಲೆ ಏರಿಕೆ ಮಾಡಿ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಮಾಡಿದೆ. ಈ ಹಿನ್ನೆಲೆ ಮುಂಗಾರು ಅಬ್ಬರದಲ್ಲಿ ನೊಂದ ರೈತರಿಗೆ ಸಂತಸದ ಸುದ್ದಿ ದೊರೆತಿದೆ.
ನವದೆಹಲಿ: ಹಿಂಗಾರು ಹಂಗಾಮಿನ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (Minimum Support Price) ಹೆಚ್ಚಿಸಿ ಕೇಂದ್ರ ಸಚಿವ ಸಂಪುಟ ಬುಧವಾರ ಮಹತ್ವದ ನಿರ್ಣಯ ಕೈಗೊಂಡಿದೆ. ಇದರಿಂದಾಗಿ ಅತಿವೃಷ್ಟಿಯಿಂದ ಮುಂಗಾರಿನಲ್ಲಿ ತತ್ತರಿಸಿರುವ ರೈತರಿಗೆ ಕೊಂಚ ಸಮಾಧಾನದ ಸಮಾಚಾರ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಗೋಧಿ (Wheat) ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 110 ರೂ. ಹೆಚ್ಚಿಸಿ 2125 ರೂ. ಗೆ, ಸಾಸಿವೆ (Mustard) ಬೆಲೆಯನ್ನು 400 ರೂ. ಹೆಚ್ಚಿಸಿ 5450 ರೂ. ಗೆ, ಸೂರ್ಯಕಾಂತಿ (Sunflower) ಬೆಲೆಯನ್ನು 209 ರೂ. ಹೆಚ್ಚಿಸಿ 5650 ರೂ.ಗೆ, ಚನ್ನಂಗಿ ಬೇಳೆ (Lentil) ಬೆಲೆಯನ್ನು 500 ರು. ಹೆಚ್ಚಿಸಿ 6000 ರೂ.ಗೆ, ಕಡಲೆ (Gram) ಬೆಲೆಯನ್ನು 105 ರೂ ಹೆಚ್ಚಿಸಿ 5335 ರೂ.ಗೆ ಹಾಗೂ ಬಾರ್ಲಿ (Barley) ಬೆಲೆಯನ್ನು 100 ರೂ. ಹೆಚ್ಚಿಸಿ 1735 ರೂ.ಗೆ ನಿಗದಿಪಡಿಸಲಾಗಿದೆ.
ಬೆಲೆ ಏರಿಕೆ ಹಣದುಬ್ಬರಕ್ಕೆ ಕಾರಣ ಆಗಲ್ಲ:
ಒಂದು ಕ್ವಿಂಟಲ್ ಗೋದಿ ಬೆಳೆಯಲು 1065 ರೂ. ಖರ್ಚಾಗುತ್ತದೆ. ಹಾಗೆಯೇ ಇತರ ಬೆಳೆಗಳ ಖರ್ಚನ್ನು ಗಮನದಲ್ಲಿ ಇರಿಸಿಕೊಂಡು ರೈತರಿಗೆ ಒಂದು ರುಪಾಯಿ ಕೂಡ ನಷ್ಟ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಪುಟ ಸಭೆ ಬಳಿಕ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಇದೇ ವೇಳೆ, ‘ಬೆಲೆ ಹೆಚ್ಚಳದಿಂದ ಹಣದುಬ್ಬರ ಆಗಬಹುದೇ?’ ಎಂಬ ಪ್ರಶ್ನೆ ತಳ್ಳಿಹಾಕಿರುವ ಅವರು, ‘ಅನ್ಯ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ’ ಎಂದಿದ್ದಾರೆ.
ಇದನ್ನು ಓದಿ: ರೈತರಿಗೆ ಮೋದಿ ಬಂಪರ್ ಕೊಡುಗೆ!
ಅಕ್ಟೋಬರ್‌ನಲ್ಲಿ ಹಿಂಗಾರು ಬೆಳೆ ಬಿತ್ತನೆ ಆರಂಭವಾಗಲಿದೆ. ಈ 6 ಧಾನ್ಯಗಳ ಪೈಕಿ ಗೋಧಿ ಹಾಗೂ ಸಾಸಿವೆ ಹಿಂಗಾರಿನ ಪ್ರಮುಖ ಬೆಳೆಗಳಾಗಿವೆ.
ಧಾನ್ಯ ಹಿಂದಿನ ದರ ದರ ಹೆಚ್ಚಳ ಪರಿಷ್ಕೃತ ದರ (ಕ್ವಿಂಟಲ್‌ಗೆ)
ಗೋಧಿ 2015 ರೂ. 110 ರೂ. 2125 ರೂ.
ಸಾಸಿವೆ 5050 ರೂ. 400 ರೂ. 5450 ರೂ.
ಸೂರ್ಯಕಾಂತಿ 5441 ರೂ. 209 ರೂ. 5650 ರೂ
ಚನ್ನಂಗಿ ಬೇಳೆ 5500 ರೂ. 500 ರೂ. 6000 ರೂ..
ಕಡಲೆ 5230 ರೂ. 105 ರೂ. 5335 ರೂ.
ಬಾರ್ಲಿ 1635 ರೂ. 100 ರೂ. 1735 ರೂ
ಇದನ್ನೂ ಓದಿ: Brown Rice: ದ.ಕ, ಉಡುಪಿ ಪಡಿತರದಾರರಿಗೆ ಸಂತಸದ ಸುದ್ದಿ ನೀಡಿದ ಕೇಂದ್ರ ಸರ್ಕಾರ