ರೈತರಿಗೆ ಶುಭ ಸುದ್ದಿ: ಈ ವರ್ಷ ಸಹಜ ಮುಂಗಾರು; ‘ಎಲ್‌ ನಿನೋ’ ಪರಿಣಾಮ ಇಲ್ಲ ಎಂದ ಹವಾಮಾನ ಇಲಾಖೆ

ಹವಾಮಾನ ಇಲಾಖೆಯ ಮುನ್ಸೂಚನೆಯನ್ನೇ ರೈತಾಪಿ ವರ್ಗ ಬಹುವಾಗಿ ನಂಬುತ್ತದೆ. ಹೀಗಾಗಿ ರೈತರ ಜೀವನಾಡಿ ಎನ್ನಿಸಿಕೊಂಡಿರುವ ಮುಂಗಾರು ಸಾಮಾನ್ಯ ಪ್ರಮಾಣದಲ್ಲಿ ಸುರಿಯುವ ಮುನ್ಸೂಚನೆ ಲಭಿಸಿರುವುದು ರೈತರಲ್ಲಿ ಆಶಾಕಿರಣ ಮೂಡಿಸಿದೆ.

india set for a normal monsoon imd forecast ash

ನವದೆಹಲಿ (ಏಪ್ರಿಲ್ 12, 2023): ಭಾರತದಲ್ಲಿ ಈ ವರ್ಷ ಮುಂಗಾರು ಕೊರತೆ ಆಗಿ, ಬರಗಾಲ ಬೀಳುವ ಶೇ.20 ರಷ್ಟು ಸಾಧ್ಯತೆ ಇದೆ ಎಂಬ ಖಾಸಗಿ ಹವಾಮಾನ ಸಂಸ್ಥೆ ‘ಸ್ಕೈಮೆಟ್‌’ ಮುನ್ಸೂಚನೆ ಬೆನ್ನಲ್ಲೇ, ಅದಕ್ಕೆ ವ್ಯತಿರಿಕ್ತವಾದ ವರದಿಯನ್ನು ಸರ್ಕಾರದ ಭಾರತೀಯ ಹವಾಮಾನ ಇಲಾಖೆ ನೀಡಿದೆ. ಈ ಮುಂಗಾರಿನಲ್ಲಿ ‘ಎಲ್‌ ನಿನೋ’ ಹವಾಮಾನ ಸ್ಥಿತ್ಯಂತರ ಉಂಟಾಗದು. ವಾಡಿಕೆಯಂತೆ ಈ ಸಲವೂ ಸಾಮಾನ್ಯ ಮುಂಗಾರು ಸುರಿಯಲಿದೆ ಎಂದು ಅದು ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ (Meteorological Department) ಮುನ್ಸೂಚನೆಯನ್ನೇ ರೈತಾಪಿ ವರ್ಗ ಬಹುವಾಗಿ ನಂಬುತ್ತದೆ. ಹೀಗಾಗಿ ರೈತರ (Farmers) ಜೀವನಾಡಿ ಎನ್ನಿಸಿಕೊಂಡಿರುವ ಮುಂಗಾರು (Monsoon) ಸಾಮಾನ್ಯ ಪ್ರಮಾಣದಲ್ಲಿ ಸುರಿಯುವ ಮುನ್ಸೂಚನೆ ಲಭಿಸಿರುವುದು ರೈತರಲ್ಲಿ ಆಶಾಕಿರಣ ಮೂಡಿಸಿದೆ.

ಇದನ್ನು ಓದಿ: ಸಿಲಿಕಾನ್‌ ಸಿಟಿಯಲ್ಲಿ ವರುಣನ ಅಬ್ಬರ: ಇನ್ನೂ 5 ದಿನ ಮಳೆ..!

‘ಈ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ದೇಶದಲ್ಲಿ ದೀರ್ಘ ಕಾಲೀನ ಸರಾಸರಿಯ ಶೇ.96 ರಷ್ಟು ಮಳೆ ಸುರಿಯಲಿದೆ. ಇದರಲ್ಲಿ ಶೇ.5 ರಷ್ಟು ಹೆಚ್ಚೂ-ಕಡಿಮೆ ಕೂಡ ಆಗಬಹುದು. ದೇಶಾದ್ಯಂತ ಸರಾಸರಿ 87 ಸೆಂ.ಮೀ. ಮಳೆ ಈ ಸಲ ಸುರಿಯಲಿದೆ’ ಎಂದು ಮುನ್ಸೂಚನೆಯ ಘೋಷಣೆ ಮಾಡಿದ ಭೂವಿಜ್ಞಾನ ಕಾರ್ಯದರ್ಶಿ (Geology Secretary) ಎಂ. ರವಿಚಂದ್ರನ್‌ ಹೇಳಿದರು.

ವಾಡಿಕೆಗಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಶೇ.67 ರಷ್ಟಿದೆ. ದಕ್ಷಿಣ ಭಾರತ, ಪೂರ್ವ-ಮಧ್ಯ ಭಾರತ, ವಾಯವ್ಯ ಭಾರತ ಹಾಗೂ ಈಶಾನ್ಯ ಭಾರತದ ಹಲವಾರು ಭಾಗಗಳಲ್ಲಿ ವಾಡಿಕೆಯ ಮಳೆ ಬೀಳಲಿದೆ. ಪಶ್ಚಿಮ ಮಧ್ಯ ಭಾರತ, ವಾಯವ್ಯ ಭಾರತ ಹಾಗೂ ಈಶಾನ್ಯ ಭಾರತದ ಕೆಲವೆಡೆ ಮಾತ್ರ ವಾಡಿಕೆಗಿಂತ ಕಡಿಮೆ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಸಂಸ್ಥೆ ಮಹಾ ನಿರ್ದೇಶಕ ಎಂ. ಮೊಹಾಪಾತ್ರ ನುಡಿದರು.

ಇದನ್ನೂ ಓದಿ: ಬಿಸಿಲಿನ ಬೇಗೆಯಿಂದ ಬಳಲುತ್ತಿರುವವರಿಗೆ ಗುಡ್‌ ನ್ಯೂಸ್‌: ರಾಜ್ಯದಲ್ಲಿ ಇಂದಿನಿಂದ 5 ದಿನ ಮಳೆ..!

ಈ ನಡುವೆ, ಎಲ್‌ ನಿನೋ ಪ್ರಭಾವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಲಾಖೆ, ‘ಎಲ್‌ ನಿನೋ (El Nino) ಸ್ಥಿತ್ಯಂತರದ ಪ್ರಭಾವು ಮುಂಗಾರಿನ ಉತ್ತರಾರ್ಧದಲ್ಲಿ ಆಗಬಹುದು. ಎಲ್‌ ನಿನೋ ಪ್ರಭಾವ ಬೀರಿದ ವರ್ಷಗಳೆಲ್ಲ ಕೆಟ್ಟ ಮುಂಗಾರು ಪಡೆದಿಲ್ಲ. 1951ರಿಂದ 2022ರವರೆಗಿನ ಎಲ್‌ ನಿನೋ ವರ್ಷಗಳಲ್ಲಿ ಶೇ.40 ರಷ್ಟು ಸಾಲುಗಳು ವಾಡಿಕೆಗಿಂತ ಅಧಿಕ ಮಳೆ ಪಡೆದಿವೆ’ ಎಂದು ಮೊಹಾಪಾತ್ರ ಸ್ಪಷ್ಟಪಡಿಸಿದರು.

ಎಲ್‌ ನಿನೋ - ಲಾ ನಿನಾ
ದಕ್ಷಿಣ ಅಮೆರಿಕ (South America) ಸಮೀಪ ಪೆಸಿಫಿಕ್‌ ಸಾಗರದಲ್ಲಿ (Pacific Ocean) ನೀರು ಬಿಸಿ ಆಗುತ್ತದೆ. ಇದಕ್ಕೆ ‘ಎಲ್‌ ನಿನೋ’ ಎನ್ನುತ್ತಾರೆ. ಇದು ಮುಂಗಾರು ಮಾರುತಗಳನ್ನು ದುರ್ಬಲಗೊಳಿಸುತ್ತದೆ. ಇನ್ನು ದಕ್ಷಿಣ ಅಮೆರಿಕ ಸಮೀಪ ಪೆಸಿಫಿಕ್‌ ಸಾಗರದಲ್ಲಿ ನೀರು ತಣ್ಣಗಾಗುತ್ತದೆ. ಇದಕ್ಕೆ ‘ಲಾ ನಿನಾ’ (La Nina) ಎನ್ನುತ್ತಾರೆ. ಇದು ಮುಂಗಾರು ಮಾರುತಗಳಿಗೆ ಬಲ ನೀಡಿ ಭಾರತಕ್ಕೆ ಉತ್ತಮ ಮಳೆ ಸುರಿಸುತ್ತದೆ. ಲಾ ನಿನಾ ಪ್ರಭಾವದ ಕಾರಣ 2019ರಿಂದ ಭಾರತದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗುತ್ತಿದೆ. 2019ರಲ್ಲಿ 971.8 ಮಿ.ಮೀ., 2020ರಲ್ಲಿ 961.4 ಮಿ.ಮೀ., 2021ರಲ್ಲಿ 874 ಮಿ.ಮೀ., ಹಾಗೂ 2022ರಲ್ಲಿ 924.8 ಮಿ.ಮೀ. ಮಳೆ ಆಗಿತ್ತು.

ಮಳೆ ಮಾಪನಗಳು:
ಶೇ.90 ರಿಂದ 95ರಷ್ಟು ಮಳೆ ಸುರಿದರೆ ಅದನ್ನು ಸಾಮಾನ್ಯಕ್ಕಿಂತ ಕಡಿಮೆ ಮಳೆ ಎನ್ನುತ್ತಾರೆ. ಶೇ.96 ರಿಂದ ಶೇ.104ರ ನಡುವೆ ಮಳೆ ಆದರೆ ಸಾಮಾನ್ಯ ಮುಂಗಾರು ಎನ್ನುತ್ತಾರೆ. ಶೇ.105ರಿಂದ ಶೇ.110 ಮಳೆ ಸುರಿದರೆ ಸಾಮಾನ್ಯಕ್ಕಿಂತ ಹೆಚ್ಚು ಎಂದು ಶೇ.110ಕ್ಕಿಂತ ಅಧಕ ಮಳೆ ಆದರೆ ಹೆಚ್ಚುವರಿ ಮಳೆ ಎನ್ನುತ್ತಾರೆ.

Latest Videos
Follow Us:
Download App:
  • android
  • ios