ಮಧ್ಯಪ್ರದೇಶದ ಶಾಜಾಪುರದಲ್ಲಿ ಬೀದಿ ನಾಯಿಯೊಂದರ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ 13 ಕೃಷ್ಣಮೃಗಗಳ ಹಿಂಡು ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿವೆ. ಈ ಘಟನೆಯಲ್ಲಿ ಕೃಷ್ಣಮೃಗಗಳನ್ನು ಬೆನ್ನಟ್ಟಿದ ನಾಯಿಯೂ ಸಹ ಮೃತಪಟ್ಟಿದ್ದು, ಅರಣ್ಯ ಇಲಾಖೆ ಈ ದುರಂತದ ಕುರಿತು ತನಿಖೆ ನಡೆಸುತ್ತಿದೆ.

ಶಾಜಾಪುರ, ಮಧ್ಯಪ್ರದೇಶ (ಜು.8): ಬೀದಿ ನಾಯಿಯೊಂದರ ದಾಳಿಯಿಂದ ತಪ್ಪಿಸಿಕೊಳ್ಳಲು ಜೀವಭಯದಿಂದ ಓಡುತ್ತಿದ್ದ ಕೃಷ್ಣಮೃಗಗಳ (Blackbucks) ಹಿಂಡು ತೆರೆದ ಬಾವಿಯೊಂದಕ್ಕೆ ಬಿದ್ದ ಪರಿಣಾಮ ಬರೋಬ್ಬರಿ 13 ಕೃಷ್ಣಮೃಗಗಳು ಉಸಿರುಗಟ್ಟಿ ಸಾವನ್ನಪ್ಪಿರುವ ದುರದೃಷ್ಟಕರ ಘಟನೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ನಡೆದಿದೆ. ಈ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಲ್ಲೆಯ ಖರ್ದೌಂಕಲನ್ ಪ್ರದೇಶದ ಕೃಷಿ ಜಮೀನೊಂದರಲ್ಲಿ ಈ ಘಟನೆ ನಡೆದಿದೆ. ಜಮೀನಿನ ಮಾಲೀಕನಿಗೆ ಅಲ್ಲಿನ ಬಾವಿಯಿಂದ ವಿಪರೀತ ವಾಸನೆ ಬರುತ್ತಿರುವುದು ಗಮನಕ್ಕೆ ಬಂದ ತಕ್ಷಣವೇ ಅವರು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಬಾವಿಯಲ್ಲಿದ್ದ 13 ಕೃಷ್ಣಮೃಗಗಳ ಕೊಳೆತ ದೇಹಗಳನ್ನು ಹೊರತೆಗೆದಿದ್ದಾರೆ. ಮೃತಪಟ್ಟ ವನ್ಯಜೀವಿಗಳಲ್ಲಿ 4 ಗಂಡು ಮತ್ತು 9 ಹೆಣ್ಣು ಕೃಷ್ಣಮೃಗಗಳು ಸೇರಿವೆ. ಇವುಗಳ ಜೊತೆಗೆ ಕೃಷ್ಣಮೃಗಗಳನ್ನು ಅಟ್ಟಿಸಿಕೊಂಡು ಹೋಗಿದ್ದ ಆ ಬೀದಿ ನಾಯಿಯ ಮೃತದೇಹವೂ ಅದೇ ಬಾವಿಯಲ್ಲಿ ಪತ್ತೆಯಾಗಿದೆ.

ಅಟ್ಟಿಸಿಕೊಂಡು ಹೋದ ನಾಯಿ, ಬೆದರಿ ಬಿದ್ದ ಮೃಗಗಳು

ಘಟನೆ ಕುರಿತು ಪ್ರಾಥಮಿಕ ತನಿಖಾ ವರದಿಯ ವಿವರ ನೀಡಿರುವ ಶಾಜಾಪುರದ ವಿಭಾಗೀಯ ಅರಣ್ಯಾಧಿಕಾರಿ (DFO) ಹೇಮಲತಾ ಶಾ ಅವರು, "ಪ್ರಾಥಮಿಕ ತನಿಖೆಯ ಪ್ರಕಾರ, ಬೀದಿ ನಾಯಿಯೊಂದು ಈ ಕೃಷ್ಣಮೃಗಗಳ ಹಿಂಡನ್ನು ಬೇಟೆಯಾಡಲು ತೀವ್ರವಾಗಿ ಬೆನ್ನಟ್ಟಿದೆ. ಇದರಿಂದ ತೀವ್ರ ಆತಂಕ ಹಾಗೂ ಗಾಬರಿಗೊಂಡ ಕೃಷ್ಣಮೃಗಗಳು ಪ್ರಾಣ ಉಳಿಸಿಕೊಳ್ಳಲು ಓಡುವಾಗ ಮುಂದೆ ಇದ್ದ ಬಾವಿಯನ್ನು ಗಮನಿಸದೆ ಅದಕ್ಕೆ ಬಿದ್ದಿವೆ. ಆವೇಶದಲ್ಲಿದ್ದ ನಾಯಿಯೂ ಸಹ ಅವುಗಳ ಬೆನ್ನಟ್ಟುವ ರಭಸದಲ್ಲಿ ಅದೇ ಬಾವಿಗೆ ಬಿದ್ದಿದೆ. ಬಾವಿಯಿಂದ ಎಲ್ಲ ಪ್ರಾಣಿಗಳ ದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇಹದ ಮಾದರಿಗಳನ್ನು (Samples) ಸಂಗ್ರಹಿಸಿ ಹೆಚ್ಚಿನ ಪ್ರಯೋಗಾಲಯದ ವಿಶ್ಲೇಷಣೆಗೆ ಕಳುಹಿಸಲಾಗಿದೆ," ಎಂದು ತಿಳಿಸಿದ್ದಾರೆ.

ಈ ದುರಂತಕ್ಕೆ ಬೇರೆ ಯಾವುದೇ ಕೋನಗಳಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. "ಪ್ರಕರಣದ ಸವಿಸ್ತಾರ ತನಿಖೆ ಪ್ರಗತಿಯಲ್ಲಿದೆ. ತನಿಖಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದ ನಂತರವೇ ಅಲ್ಲಿ ನಿಖರವಾಗಿ ಏನಾಯಿತು ಎಂದು ಅಧಿಕೃತವಾಗಿ ಹೇಳಲು ಸಾಧ್ಯ. ಆದರೆ, ಮೇಲ್ನೋಟಕ್ಕೆ ನಾಯಿ ಅಟ್ಟಿಸಿಕೊಂಡು ಹೋದ ಕಾರಣಕ್ಕೇ ಈ ವನ್ಯಜೀವಿಗಳು ಬಾವಿಗೆ ಬಿದ್ದು ಸಾವನ್ನಪ್ಪಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ," ಎಂದು ಡಿಎಫ್‌ಒ ಹೇಮಲತಾ ಶಾ ಹೇಳಿದ್ದಾರೆ.