ಉತ್ತರಾಖಂಡದ ರಾಣಿಖೇತ್‌ನಲ್ಲಿ, ಬುದ್ಧಿಮಾಂದ್ಯ ಯುವತಿಯೊಬ್ಬಳು ದಟ್ಟ ಅರಣ್ಯದಲ್ಲಿ 6 ದಿನಗಳ ಕಾಲ ಕಳೆದುಹೋಗಿದ್ದಳು. ಹಸಿವಿನಿಂದ ಬದುಕಲು ಹುಲ್ಲು ಮತ್ತು ಕಾಡು ಗಿಡಗಳನ್ನು ತಿಂದು, ಅಂತಿಮವಾಗಿ ಪೊಲೀಸರು ಮತ್ತು ಗ್ರಾಮಸ್ಥರ ಜಂಟಿ ಕಾರ್ಯಾಚರಣೆಯಲ್ಲಿ ಪವಾಡಸದೃಶವಾಗಿ ರಕ್ಷಿಸಲ್ಪಟ್ಟಳು.
ಬಾಗೇಶ್ವರ, ಉತ್ತರಾಖಂಡ (ಜು.8): ದಟ್ಟ ಅರಣ್ಯ, ಕ್ರೂರ ಮೃಗಗಳ ಸಂಚಾರ, ಹನಿ ಕುಡಿಯುವ ನೀರಿಲ್ಲ, ತಿನ್ನಲು ಆಹಾರವಿಲ್ಲ.. ಇಂತಹ ಭೀಕರ ಪರಿಸ್ಥಿತಿಯಲ್ಲಿ ಬರೋಬ್ಬರಿ 6 ದಿನಗಳ ಕಾಲ ಕೇವಲ ಹುಲ್ಲು ಮತ್ತು ಕಾಡು ಗಿಡಗಂಟಿಗಳನ್ನು ತಿಂದು 28 ವರ್ಷದ ಬುದ್ಧಿಮಾಂದ್ಯ ಯುವತಿಯೊಬ್ಬಳು ಪವಾಡಸದೃಶವಾಗಿ ಬದುಕುಳಿದಿರುವ ರೋಮಾಂಚನಕಾರಿ ಘಟನೆ ಉತ್ತರಾಖಂಡದ ರಾಣಿಖೇತ್‌ನಲ್ಲಿ ನಡೆದಿದೆ. ವನ್ಯಮೃಗಗಳ ಹಾವಳಿ ಹೆಚ್ಚಿರುವ ದಟ್ಟ ಅರಣ್ಯದ 12 ರಿಂದ 13 ಕಿಲೋಮೀಟರ್ ಒಳಭಾಗದಲ್ಲಿ ಮಂಗಳವಾರ ಯುವತಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಣಿಖೇತ್‌ನ ಮಜ್‌ಖಾಲಿ ಗ್ರಾಮದ ನಿವಾಸಿಯಾದ ಈ ಯುವತಿ, ಜುಲೈ 1 ರ ಸಂಜೆ ತನ್ನ ತಂದೆಯೊಂದಿಗೆ ಸುಂದರ್‌ಖಾಲ್ ಅರಣ್ಯ ಪ್ರದೇಶಕ್ಕೆ ವಾಕಿಂಗ್ ಹೋಗಿದ್ದಳು. ಹಿಂತಿರುಗುವಾಗ ವಿಪರೀತ ಸುಸ್ತಾಗುತ್ತಿದೆ ಎಂದು ದಾರಿಯಲ್ಲೇ ಕುಳಿತಿದ್ದಳು. ತಂದೆ ಆಕೆಯನ್ನು ಕರೆದೊಯ್ಯಲು ಕೇವಲ 20 ನಿಮಿಷಗಳ ನಂತರ ಅದೇ ಜಾಗಕ್ಕೆ ವಾಪಸ್ ಬಂದಾಗ ಯುವತಿ ಅಲ್ಲಿರಲಿಲ್ಲ. ಮೊದಲು ಕುಟುಂಬಸ್ಥರೇ ಕಾಡಿನ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಆದರೆ, ಆಕೆ ಕೊನೆಯದಾಗಿ ಕಾಣಿಸಿಕೊಂಡಿದ್ದ ಜಾಗದ ಬಳಿ ಕೇವಲ ಒಂದು ಚಪ್ಪಲಿ ಮಾತ್ರ ಪತ್ತೆಯಾಗಿದ್ದರಿಂದ ತೀವ್ರ ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ವನ್ಯಮೃಗಗಳ ಆತಂಕ ಮತ್ತು ಜಂಟಿ ಕಾರ್ಯಾಚರಣೆ
ಕಾಡಿನಲ್ಲಿ ಚಪ್ಪಲಿ ಮಾತ್ರ ಸಿಕ್ಕಿದ್ದರಿಂದ ವನ್ಯಮೃಗಗಳು ದಾಳಿ ಮಾಡಿರಬಹುದು ಎಂಬ ಆತಂಕ ಸ್ಥಳೀಯರಲ್ಲಿ ದಟ್ಟವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳು ಗ್ರಾಮಸ್ಥರೊಂದಿಗೆ ಸೇರಿಕೊಂಡು ದಟ್ಟ ಅರಣ್ಯದಲ್ಲಿ ಬೃಹತ್ ಜಂಟಿ ಶೋಧ ಕಾರ್ಯ ಆರಂಭಿಸಿದವು. ಆದರೆ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಹುಲ್ಲು ತಿಂದು ಬದುಕಿದ್ದ ಯುವತಿ ಪತ್ತೆಯಾಗಿದ್ದು ಹೇಗೆ?
ಕಾಡಿನಲ್ಲಿ ಕಳೆದುಹೋಗಿದ್ದ ಯುವತಿಯ ಪತ್ತೆಗೆ ಮಂಗಳವಾರ ಮಹತ್ವದ ತಿರುವು ಸಿಕ್ಕಿತು. ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಕಾಡಿನ ಅತ್ಯಂತ ಒಂಟಿ ಭಾಗಕ್ಕೆ ಹೋಗಿದ್ದ ಕೆಲವು ಗ್ರಾಮಸ್ಥರಿಗೆ ಯುವತಿಯು ಕೂಗಾಡುತ್ತಿರುವ ಧ್ವನಿ ಕೇಳಿಸಿದೆ. ಧ್ವನಿ ಬಂದ ಕಡೆಗೆ ತೆರಳಿದ ಗ್ರಾಮಸ್ಥರಿಗೆ ದುರ್ಗಮ ಬೆಟ್ಟದ ಹಾದಿಯಲ್ಲಿ ಆಕೆ ಗಾಯಗೊಂಡ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಅವರು ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆಗಳು ಆಕೆಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ, ದಟ್ಟ ಕಾಡಿನ ಮಧ್ಯೆ ಹಲವಾರು ಕಿಲೋಮೀಟರ್ ನಡೆದುಕೊಂಡು ಬಂದು ಮುಖ್ಯ ರಸ್ತೆಗೆ ತಲುಪಿಸಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆ ಯುವತಿ ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ತಂದೆಯಿಂದ ದೂರವಾದ ಬಳಿಕ ಕಾಡಿನಲ್ಲಿ ದಾರಿ ತಪ್ಪಿದ್ದಾಗಿ ಹೇಳಿದ್ದಾಳೆ. ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತಿದ್ದಾಗ ಬದುಕಲು ಬೇರೆ ದಾರಿಯಿಲ್ಲದೆ ಸಿಕ್ಕ ಸಿಕ್ಕ ಹುಲ್ಲು ಮತ್ತು ಕಾಡು ಸಸ್ಯಗಳನ್ನು ತಿಂದು ತಾನು ಪ್ರಾಣ ಉಳಿಸಿಕೊಂಡಿದ್ದಾಗಿ ಆಕೆ ಕಣ್ಣೀರು ಹಾಕಿದ್ದಾಳೆ.
ಆಸ್ಪತ್ರೆಗೆ ದಾಖಲು-ಅಧಿಕಾರಿಗಳ ಎಚ್ಚರಿಕೆ
ಘಟನೆ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಹರ್ಬನ್ಸ್ ಸಿಂಗ್, "ಯುವತಿ ನಾಪತ್ತೆಯಾದ ಮಾಹಿತಿ ಸಿಕ್ಕ ತಕ್ಷಣವೇ ತೀವ್ರ ಶೋಧ ಕಾರ್ಯ ಆರಂಭಿಸಲಾಗಿತ್ತು. ಆಕೆಯನ್ನು ಗಾಯಗೊಂಡ ಸ್ಥಿತಿಯಲ್ಲಿ ರಕ್ಷಿಸಿ ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ರಾಣಿಖೇತ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಆಕೆ ಕಾಡಿನಲ್ಲಿ ದಾರಿ ತಪ್ಪಿರುವುದು ದೃಢಪಟ್ಟಿದೆ" ಎಂದು ತಿಳಿಸಿದ್ದಾರೆ. ಯುವತಿ ಸಂಪೂರ್ಣ ಗುಣಮುಖಳಾದ ನಂತರ ಆಕೆಯ ಸವಿಸ್ತಾರ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ, ಅರಣ್ಯದ ಅಂಚಿನಲ್ಲಿ ವಾಸಿಸುವ ಜನರು ಒಂಟಿಯಾಗಿ ಕಾಡಿನ ಒಳಭಾಗಕ್ಕೆ ಹೋಗಬಾರದು ಮತ್ತು ಯಾರಾದರೂ ನಾಪತ್ತೆಯಾದರೆ ತಕ್ಷಣವೇ ಅಧಿಕಾರಿಗಳಿಗೆ ತಿಳಿಸಬೇಕು ಎಂದು ವಿನಂತಿಸಿದ್ದಾರೆ.


