12 ವರ್ಷದ ಬಾಲಕನೋರ್ವ ಪರೀಕ್ಷೆಯಲ್ಲಿ ಶಿಕ್ಷಕರಿಗೆ ಸಿಕ್ಕಿಬಿದ್ದ, ನಂತರ ಕಬ್ಬಿಣದ ರಾಡ್‌ನಿಂದ ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾನೆ. ಇಂತಹ ಆಘಾತಕಾರಿ ಘಟನೆ ನೆರೆಯ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.
ಹೈದರಾಬಾದ್: ಗುರುಗಳು ದೇವರ ಸಮಾನ ಎಂಬ ನಂಬಿಕೆ ಇದೆ. ದೇಶದ ನಾಳೆಯ ಪ್ರಜೆ ಎನಿಸುವ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಗುರುಗಳಿಗೆ ಸಮಾಜದಲ್ಲಿ ಉನ್ನತವಾದ ಗೌರವವಿದೆ. ಗುರುವಿನ ಪಾದ ಹಿಡಿದವನಿಗೆ ಕಷ್ಟಗಳಿಲ್ಲ ಎಂಬುದು ಹಿರಿಯರ ಮಾತು. ಆದರೆ ಇಲ್ಲೊಬ್ಬ 7ನೇ ಕ್ಲಾಸ್‌ನಲ್ಲಿ ಓದ್ತಿದ್ದ ವಿದ್ಯಾರ್ಥಿ ಪಾಠ ಹೇಳಿಕೊಟ್ಟ ಶಿಕ್ಷಕನಿಗೆ ಥಳಿಸಿದ್ದಾನೆ. 12 ವರ್ಷದ ಬಾಲಕನೋರ್ವ ಪರೀಕ್ಷೆಯಲ್ಲಿ ಶಿಕ್ಷಕರಿಗೆ ಸಿಕ್ಕಿಬಿದ್ದ, ನಂತರ ಕಬ್ಬಿಣದ ರಾಡ್‌ನಿಂದ ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾನೆ. ಇಂತಹ ಆಘಾತಕಾರಿ ಘಟನೆ ನೆರೆಯ ರಾಜ್ಯ ತೆಲಂಗಾಣದಲ್ಲಿ ನಡೆದಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ಅಂತಿಮ ಪರೀಕ್ಷೆಯ ಸಮಯದಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ನಂತರ ಕಬ್ಬಿಣದ ರಾಡ್‌ನಿಂದ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ. ವಿದ್ಯಾರ್ಥಿ ಮಾಡಿದ ಹಲ್ಲೆಯಿಂದ ಶಿಕ್ಷಕನ ತಲೆಗೆ ಸಣ್ಣಪುಟ್ಟ ಗಾಯವಾಗಿದೆ ಆದರೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ.
ಬುಧವಾರ ಈ ಘಟನೆ ನಡೆದಿದೆ. ಹೈದರಾಬಾದ್‌ನ ಬೇಗಂಪೇಟೆ ಠಾಣಾ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬೇಗಂಪೇಟೆ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬೇಗಂಪೇಟೆಯ ಬಂಡಿಮೆಟ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ಬುಧವಾರ ಮಧ್ಯಾಹ್ನ ಪೊಲೀಸರಿಗೆ ದೂರು ನೀಡಿದ್ದಾರೆ, ದೂರಿನಲ್ಲಿ 7 ನೇ ತರಗತಿಯ ವಿದ್ಯಾರ್ಥಿಯೊಬ್ಬರು ತಮ್ಮ ತಲೆಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ಶಿಕ್ಷಕರಾದ ವೇಣುಗೋಪಾಲ್ ಆರೋಪಿಸಿದ್ದಾರೆ.
ರಾಣಾ ಹಸ್ತಾಂತರ: ಕಾಂಗ್ರೆಸ್-ಬಿಜೆಪಿ ನಡುವೆ ಕ್ರೆಡಿಟ್ ವಾರ್!
ವಿದ್ಯಾರ್ಥಿ ಶಾಲೆಯಲ್ಲಿ ಗಂಟೆ ಬಾರಿಸುವ ರಾಡ್‌ನಿಂದ ಶಿಕ್ಷಕ ವೇಣುಗೋಪಾಲ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ ಇದರಿಂದ ಅವರ ತಲೆಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ನಾವು ಹಲ್ಲೆ ಪ್ರಕರಣ ದಾಖಲಿಸಿದ್ದೇವೆ ಎಂದು ಬೇಗಂಪೇಟೆ ಇನ್ಸ್‌ಪೆಕ್ಟರ್ ಬಿ ಪ್ರಸಾದ ರಾವ್ ತಿಳಿಸಿದ್ದಾರೆ.
ಈ ಘಟನೆ ಬುಧವಾರ ನಡೆದಿದೆ ಎಂದು ಶಾಲೆಯ ಪ್ರಾಂಶುಪಾಲ ಚಂದ್ರಶೇಖರ ಶರ್ಮಾ ತಿಳಿಸಿದ್ದಾರೆ. ಪರೀಕ್ಷೆ ಮುಗಿದ ನಂತರ ಬಾಲಕ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಹೀಗಾಗಿ ಶಿಕ್ಷಕರು ಮತ್ತು ಇತರರು ಸಮಸ್ಯೆಯನ್ನು ಬಗೆಹರಿಸಲು ಪೊಲೀಸ್ ಠಾಣೆಗೆ ಹೋದರು ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾಗೆ ಹೈದರಾಬಾದ್ ಜಿಲ್ಲಾ ಶಿಕ್ಷಣ ಅಧಿಕಾರಿ (DEO) ಆರ್. ರೋಹಿಣಿ ಪ್ರತಿಕ್ರಿಯಿಸಿದ್ದು, ಇದು ಪರೀಕ್ಷೆಯ ಮೊದಲ ದಿನವಾಗಿತ್ತು. ಶಿಕ್ಷಕರು ಬಾಲಕ ನಕಲು ಮಾಡುವುದನ್ನು ಹಿಡಿದು, ಹುಡುಗನನ್ನು ಇತರ ವಿದ್ಯಾರ್ಥಿಗಳಿಂದ ಬೇರ್ಪಡಿಸಿ ಬೇರೆ ಸ್ಥಳದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರು. ಆದರೆ ಪರೀಕ್ಷೆ ಮುಗಿದ ನಂತರ, ವಿದ್ಯಾರ್ಥಿ ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯ ನಂತರ, ಬಾಲಕನ ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಶಿಕ್ಷಕರನ್ನು ಭೇಟಿಯಾಗಿ ವಿದ್ಯಾರ್ಥಿಯ ವರ್ತನೆಗೆ ಕ್ಷಮೆಯಾಚಿಸಿದರು ಎಂದು ಡಿಇಒ ಹೇಳಿದ್ದಾರೆ.
ಬಿಬಿಎಂಪಿ ಕಸ ವಿಲೇವಾರಿಗೆ ಛೀಮಾರಿ ಹಾಕಿದ ಸ್ವಚ್ಛ ಭಾರತ ಮಿಷನ್ ತಂಡ!
ಆದರೆ ಈಗ ಬಾಲಕನ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೂರನ್ನು ಹಿಂಪಡೆಯಲು ಶಿಕ್ಷಕರು ಒಪ್ಪಿಕೊಂಡಿದ್ದಾರೆ ಮತ್ತು ಬಾಲಕನ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಆದರೆ ಈ ಹಲ್ಲೆ ಮಾಡಿದ ಬಾಲಕ ಬಾಲಾಪರಾಧಿಯಾಗಿರುವುದರಿಂದ, ದೂರಿನ ಕುರಿತು ಬಾಲಕನ ಕುಟುಂಬ ಸದಸ್ಯರಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ತನಿಖೆಯ ನಂತರ, ಅವರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.
