ಗ್ರೇಟರ್ ನೋಯ್ಡಾದಲ್ಲಿ, ಸಿಆರ್‌ಪಿಎಫ್ ಜವಾನನ ಮನೆಯಲ್ಲಿ ಕೆಲಸಕ್ಕಿದ್ದ 10 ವರ್ಷದ ಬಾಲಕಿಯ ಮೇಲೆ ದಂಪತಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಸರಿಯಾಗಿ ಊಟ ನೀಡದೆ ಉಪವಾಸ ಹಾಕಿ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಬಾಲಿಯ ಪಕ್ಕೆಲುಬು ಮುರಿದಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ.

ಬಡತನದ ಜೊತೆಗೆ ಕುಟುಂಬ ಅಪ್ಪ ಅಮ್ಮ ಸರಿ ಇಲ್ಲದೇ ಹೋದರೆ ಪುಟ್ಟ ಮಕ್ಕಳು ಎಂತಹಾ ದುರಂತಮಯ ಸ್ಥಿತಿ ತಲುಪಬಹುದು ಎಂಬುದಕ್ಕೆ ಗ್ರೇಟರ್ ನೋಯ್ಡಾದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಆ 10 ವರ್ಷದ ಬಾಲಕಿಯ ಅಪ್ಪ ಹೆಂಡತಿ ಮಕ್ಕಳನ್ನು ತೊರೆದು ಹೋಗಿದ್ದ. ಅಮ್ಮ ಮಾನಸಿಕ ಅಸ್ವಸ್ಥೆಯಾಗಿದ್ದಳು. ಹೀಗಾಗಿ ಯಾರೋ ಆಕೆಯನ್ನು ಹೊಟ್ಟೆಪಾಡಿಗಾಗಿ ಮಗುವನ್ನು ನೋಡಿಕೊಳ್ಳುವುದಕ್ಕೆ ಪಟ್ಟಣಕ್ಕೆ ಕಳುಹಿಸಿದ್ದರು. 10 ವರ್ಷದ ಆ ಬಾಲೆಯನ್ನೇ ಯಾರಾದರೂ ನೋಡಿಕೊಳ್ಳಬೇಕು ಆದರೆ ವಿಧಿಬರಹದಿಂದಾಗಿ ಆಕೆ ಸಿಆರ್‌ಪಿಎಫ್‌ನಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬರ ಪುಟ್ಟ ಮಗುವನ್ನು ನೋಡಿಕೊಳ್ಳುವುದಕ್ಕೆ ದೂರದ ಪಶ್ಚಿಮ ಬಂಗಾಳದಿಂದ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾಗೆ ಬಂದಿದ್ದಳು. ಆದರೆ ಆ ಬಾಲಕಿ ಮೇಲೆ ಕ್ರೌರ್ಯ ಮೆರೆದ ಆ ದಂಪತಿ ಆಕೆಗೆ ಸರಿಯಾಗಿ ಊಟ ನೀಡದೇ ಉಪವಾಸ ಹಾಕಿದ್ದಲ್ಲದೇ ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದರು. ಆಕೆಯ ತಲೆಯನ್ನು ಗೋಡೆಗೆ ಗುದ್ದಿದ್ದರು. ಈ ಭೀಕರವಾದ ದೈಹಿಕ ಹಲ್ಲೆಯಿಂದ ಈಗ ಆಕೆಯ ದೇಹದ ಪಕ್ಕೆಲುಬುಗಳು ಮುರಿದಿದ್ದು, ಬದುಕಿಗಾಗಿ ಆಸ್ಪತ್ರೆಯ ಬೆಡ್‌ ಮೇಲೆ ಜೀವನ್ಮರಣದ ಹೋರಾಟ ಮಾಡುತ್ತಿದ್ದಾಳೆ. ಆಕೆಗೆ ಆಹಾರ ನೀಡದೇ ಉಪವಾಸ ಹಾಕಿದ ಪರಿಣಾಮ ಆಕೆಯ ಹಿಮೋಗ್ಲೋಬಿನ್ ಮಟ್ಟ 1.9ಕ್ಕೆ ಇಳಿದಿದೆ.

ಹೀಗೆ ಪುಟ್ಟ ಬಾಲಕಿಯ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಎಫ್ ಜವಾನ ತಾರಿಕ್ ಅನ್ವರ್ ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಮನೆಕೆಲಸ ಮಾಡ್ತಿದ್ದ ಮನೆಯವರಿಂದ ಗಂಭೀರ ಹಲ್ಲೆಗೊಳಗಾಗಿ ಗಂಭೀರ ಸ್ಥಿತಿಯಲ್ಲಿರುವ ಬಾಲಕಿ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ನಿವಾಸಿಯಾಗಿದ್ದಾಳೆ. ಈಕೆಗೆ ಆರು ಒಡಹುಟ್ಟಿದವರಿದ್ದು, ಈಕೆಯೇ ಮನೆಯ ಹಿರಿಯ ಮಗಳಾಗಿದ್ದಳು. ಕಳೆದ ವರ್ಷ ಆಕೆಯ ತಂದೆ ಕುಟುಂಬವನ್ನು ತೊರೆದು ಬೇರೆ ಮದುವೆಯಾಗಿದ್ದರಿಂದ ಇತ್ತ ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದರಿಂದ ಇಡೀ ಕುಟುಂಬದ ಜವಾಬ್ದಾರಿ ಈಕೆಯ ಮೇಲೆ ಬಿದ್ದಿತ್ತು. ಸುಮಾರು 40 ದಿನಗಳ ಹಿಂದಷ್ಟೇ ಈಕೆ ಮನೆಕೆಲಸದವಳಾಗಿ ಸಿಆರ್‌ಪಿಎಫ್ ಜವಾನನ ಮನೆಗೆ ಬಂದಿದ್ದಳು. ಸಿಆರ್‌ಪಿಎಫ್ ಜವಾನ ತಾರಿಖ್ ಅನ್ವರ್‌ನ ಇಬ್ಬರು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಆಕೆಯದ್ದಾಗಿತ್ತು. ಆದರೆ ಜನವರಿ 14ರಂದು ಮನೆ ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಆಕೆಯ ಮೇಲೆ ತಾರಿಖ್ ಅನ್ವರ್ ಹಾಗೂ ಆತನ ಪತ್ನಿ ಹಲ್ಲೆ ಮಾಡಿದ್ದಾರೆ.

ಹಲ್ಲೆಯಿಂದಾಗಿ ಬಾಲಕಿ ಕುಸಿದು ಬಿದ್ದು ರಕ್ತಸ್ರಾವವಾಗಿದ್ದಲ್ಲದೇ ಪ್ರಜ್ಞೆ ಕಳೆದುಕೊಂಡಾಗ, ಆ ದಂಪತಿಗಳು ಆಕೆಯನ್ನು ಗ್ರೇಟರ್ ನೋಯ್ಡಾದ ಸರ್ವೋದಯ ಆಸ್ಪತ್ರೆಗೆ ಕರೆದೊಯ್ದರು. ಆಕೆ ಸ್ನಾನಗೃಹದಲ್ಲಿ ಜಾರಿ ಬಿದ್ದಿದ್ದಾಳೆಂದು ವೈದ್ಯರಿಗೆ ತಿಳಿಸಿದರು. ಆದರೆ ವೈದ್ಯರಿಗೆ ಅನುಮಾನ ಬಂದು ಅವರು ವೈದ್ಯಕೀಯ ಕಾನೂನು ವರದಿಯನ್ನು ಸಿದ್ಧಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ದೇಹದಲ್ಲಿ ಹಳೆಯ ಗಾಯಗಳ ಜೊತೆ ಹೊಸದಾದ ಗಾಯಗಳಿದ್ದವು. ಕಾಲುಗಳಲ್ಲಿ ಊತ, ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಮತ್ತು ತೀವ್ರ ಅಪೌಷ್ಟಿಕತೆ ಬಾಲಕಿಯಲ್ಲಿ ಕಂಡು ಬಂದಿತ್ತು. ಮಗುವಿನ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ ಹಿನ್ನೆಲೆ ಆಕೆಯನ್ನು ನೋಯ್ಡಾದ ಕ್ಟರ್ 128 ರಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಆಕೆಗೆ ವೆಂಟಿಲೇಟರ್ ಬೆಂಬಲ ನೀಡಲಾಗಿದೆ.

ಇದನ್ನೂ ಓದಿ: ಕೋಲಾರದಲ್ಲಿ ನೈತಿಕ ಪೊಲೀಸ್‌ಗಿರಿ: ಮುಸ್ಲಿಂ ಯುವತಿ ಜೊತೆಗಿದ್ದ ಹಿಂದೂ ಹುಡುಗರ ಮೇಲೆ ಹಲ್ಲೆ

ಘಟನೆಯ ಬಳಿಕ ಪೊಲೀಸರು ಸಿಆರ್‌ಪಿಎಫ್ ಜವಾನ ತಾರಿಖ್ ಅನ್ವರ್ ಹಾಗೂ ಆತನ ಪತ್ನಿ ರಿಂಪಾ ಖಾತುನ್ ಅವರನ್ನು ಬಂಧಿಸಲಾಗಿದೆ. ಬಡತನ ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿಯಲ್ಲಿದ್ದ ಆ ಬಾಲಕಿಯ ಕುಟುಂಬ ಊರು ಬಿಟ್ಟು ಹೋಗಿ ಬೇರೆಡೆ ಸೇರಿಕೊಂಡರೆ ಕನಿಷ್ಠ ಹೊಟ್ಟೆತುಂಬಾ ಊಟವಾದರೂ ಮಕ್ಕಳಿಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿತ್ತು. ಆದರೆ ಆ ಮಗುವಿಗೆ ತುತ್ತು ಅನ್ನ ಸಿಗುವುದು ಬಿಡಿ ನೆಮ್ಮದಿಯಾಗಿ ಉಸಿರಾಡುವುದಕ್ಕೂ ಕಷ್ಟಪಡುವಂತಹ ಸ್ಥಿತಿ ಅಲ್ಲಿ ನಿರ್ಮಾಣವಾಗಿದ್ದು ವಿಪರ್ಯಾಸ

ಇದನ್ನೂ ಓದಿ: BMTC ಬಸ್‌ ಟಿಕೆಟ್ ಹಣ ಆನ್‌ಲೈನ್ ಪಾವತಿ ವೇಳೆ ಎಡವಟ್ಟು: 6 ರೂ. ಬದಲು 60,000 ರೂ. ಪೇ ಮಾಡಿದ ಪ್ರಯಾಣಿಕ