ಉತ್ತರ ಪ್ರದೇಶದಲ್ಲಿ ಮಹಾಕುಂಭಮೇಳಕ್ಕೆ ತೆರಳುತ್ತಿದ್ದ 10 ಭಕ್ತರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಛತ್ತೀಸ್‌ಗಢದ ಭಕ್ತರಿದ್ದ ಕಾರು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತರು ಛತ್ತೀಸ್‌ಗಢದ ಕೋರ್ಬಾಗೆ ಸೇರಿದವರು.

ನವದೆಹಲಿ (ಫೆ.15): ಉತ್ತರ ಪ್ರದೇಶದ ಮಿರ್ಜಾಪುರ-ಪ್ರಯಾಗ್‌ರಾಜ್‌ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮಹಾಕುಂಭಮೇಳಕ್ಕೆ ತೆರಳುತ್ತಿದ್ದ 10 ಭಕ್ತರು ಸಾವು ಕಂಡಿದ್ದಾರೆ. ಸಾವು ಕಂಡಿರುವ ಭಕ್ತರನ್ನು ಛತ್ತೀಸ್‌ಗಢದವರು ಎಂದು ಗುರುತಿಸಲಾಗಿದೆ. ಭಕ್ತರಿದ್ದ ಬೊಲೊರೋ ಕಾರ್‌, ಮಧ್ಯಪ್ರದೇಶದ ರಾಜ್‌ಗಢದಿಂದ ಬರುತ್ತಿದ್ದ ಬಸ್‌ಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ 19 ಮಂದಿಗೆ ಗಾಯಗಳಾಗಿವೆ ಎಂದೂ ವರದಿಯಾಗಿದೆ. ತಡರಾತ್ರಿ ನಡೆದ ಘಟನೆಯಲ್ಲಿ ಕಾರ್‌ನಿಂದ ಮರತದೇಹವನ್ನು ಹೊರತೆಗೆಯಲು ಮೂರು ಗಂಟೆಗೂ ಅಧಿಕ ಕಾಲ ಪೊಲೀಸರು ಶ್ರಮವಹಿಸಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಾವನ್ನಪ್ಪಿದ ಭಕ್ತರು ಛತ್ತೀಸ್‌ಗಢದ ಕೋರ್ಬಾಗೆ ಸೇರಿದವರು ಎಂದು ಗುರುತಿಸಲಾಗಿದೆ. ಅವರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಕುಂಭಕ್ಕೆ ತೆರಳುತ್ತಿದ್ದರು. ಅಪಘಾತದ ಸಮಯದಲ್ಲಿ ಬಸ್‌ನಲ್ಲಿ ಮಧ್ಯಪ್ರದೇಶದ ರಾಜ್‌ಗಢದ ಯಾತ್ರಿಕರು ಕೂಡ ಇದ್ದರು.

"ಛತ್ತೀಸ್‌ಗಢದಿಂದ ಮಹಾಕುಂಭಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ಕಾರು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹತ್ತು ಜನರು ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿಯ ಸುಮಾರಿಗೆ ಪ್ರಯಾಗ್‌ರಾಜ್-ಮಿರ್ಜಾಪುರ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ವರೂಪ್ ರಾಣಿ ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಪ್ರಯಾಗ್‌ರಾಜ್ ಹೆಚ್ಚುವರಿ ಎಸ್‌ಪಿ ವಿವೇಕ್ ಚಂದ್ರ ಯಾದವ್ ತಿಳಿಸಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದ ಮಾಹಿತಿ ಪಡೆದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಧಿಕಾರಿಗಳಿಗೆ ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.

ಮಹಾ ಕುಂಭಮೇಳಕ್ಕೆ ಬರುವ ಭಕ್ತರಿಗೆ ಅಪಘಾತ ಸಂಭವಿಸಿದ್ದು ಇದೇ ಮೊದಲಲ್ಲ. ಮಂಗಳವಾರ, ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಹೆದ್ದಾರಿಯಲ್ಲಿ ಮಹಾ ಕುಂಭ ಮೇಳದಿಂದ ಹಿಂತಿರುಗುತ್ತಿದ್ದ ಆಂಧ್ರಪ್ರದೇಶದ ಏಳು ಜನರು ತಮ್ಮ ಟೆಂಪೋ ಟ್ರಾವೆಲರ್ ಟ್ರಕ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು. ಸೋಮವಾರ, ಕುಂಭಮೇಳದಿಂದ ಹಿಂತಿರುಗುತ್ತಿದ್ದಾಗ ಆಗ್ರಾದ ದಂಪತಿಗಳ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು ಮತ್ತು ಇತರ ನಾಲ್ವರು ಗಾಯಗೊಂಡರು. ಸ್ಟೇಷನ್ ಹೌಸ್ ಅಧಿಕಾರಿ ರುದ್ರ ಪ್ರತಾಪ್ ಸಿಂಗ್ ಅವರ ಪ್ರಕಾರ, ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಚಾಲಕನನ್ನು ಬಂಧಿಸಲಾಗಿದೆ.

ಮಹಾಕುಂಭ 2025: 50 ಕೋಟಿ ಭಕ್ತರ ಪುಣ್ಯಸ್ನಾನ!

ಸೋಮವಾರ ಉತ್ತರ ಪ್ರದೇಶದ ಸೋನಭದ್ರದಲ್ಲಿ ಮಹಾ ಕುಂಭಮೇಳದಿಂದ ವಾಪಸಾಗುತ್ತಿದ್ದ ಕಾರು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಡಿಶಾದ ರೂರ್ಕೆಲಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇತರ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾ ಕುಂಭ ಮೇಳವು ಜನವರಿ 13 ರಂದು ಪ್ರಾರಂಭವಾಯಿತು. ಇದು ಫೆಬ್ರವರಿ 26 ರವರೆಗೆ ನಡೆಯಲಿದೆ, ಆ ದಿನ ಮಹಾ ಶಿವರಾತ್ರಿ ಆಚರಿಸಲಾಗುತ್ತದೆ. ಉತ್ತರ ಪ್ರದೇಶ ಸರ್ಕಾರದ ಪ್ರಕಾರ, ಶುಕ್ರವಾರ ಸಂಜೆ 6 ಗಂಟೆಯವರೆಗೆ 92 ಲಕ್ಷಕ್ಕೂ ಹೆಚ್ಚು ಭಕ್ತರು ಸ್ನಾನ ಮಾಡಿದ್ದು, ಮಹಾಕುಂಭದಲ್ಲಿ ಒಟ್ಟು 50 ಕೋಟಿ (ಶುಕ್ರವಾರದವರೆಗೆ) ಭಕ್ತರು ಭಾಗವಹಿಸಿದ್ದಾರೆ.

ಮೋನಾಲಿಸಾಗೆ ಅಕ್ಷರ ಕಲಿಸ್ತಿದ್ದಾರೆ ಸನೋಜ್ ಮಿಶ್ರಾ, ಹತ್ತು ವರ್ಷವಾದ್ರೂ ಸಿನಿಮಾ ಡೌಟ್ ಅಂತಿದ್ದಾರೆ ವೀಕ್ಷಕರು