ಮ್ಯಾಂಚೆಸ್ಟರ್(ಜೂ.23): ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹೋರಾಟ ಮುಂದುವರಿದಿದೆ. ವೆಸ್ಟ್ ಇಂಡೀಸ್ ವಿರುದ್ದ ಕೇನ್ ವಿಲಿಯಮ್ಸನ್ ಶತಕ ಹಾಗೂ ರಾಸ್ ಟೇಲರ್ ಅರ್ಧಶಕದ ನೆರವಿನಿಂದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 291 ರನ್ ಸಿಡಿಸಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ಮೊದಲ ಎಸೆತದಲ್ಲಿ ಮಾರ್ಟಿನ್ ಗಪ್ಟಿಲ್ ವಿಕೆಟ್ ಕಳೆದುಕೊಂಡಿತು. ಗಪ್ಟಿಲ್ ಶೂನ್ಯ ಸುತ್ತಿದ್ದರು. ಇನ್ನು 5ನೇ ಎಸೆತದಲ್ಲಿ ಕಾಲಿನ್ ಮುನ್ರೊ ಡಕೌಟ್ ಮೂಲಕ ಪೆವಿಲಿಯನ್ ಸೇರಿಕೊಂಡರು.  ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಹೋರಾಟದಿಂದ ನ್ಯೂಜಿಲೆಂಡ್ ಚೇತರಿಸಿಕೊಂಡಿತು.

ವಿಲಿಯಮ್ಸನ್ ಹಾಗೂ ಟೇಲರ್ ಜೊತೆಯಾಟ ವೆಸ್ಟ್ ಇಂಡೀಸ್ ತಲೆ ನೋವು ಹೆಚ್ಚಿಸಿತು. ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೇನ್ ವಿಲಿಯಮ್ಸನ್ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಆದರೆ ಹಾಫ್ ಸೆಂಚುರಿ ಸಿಡಿಸಿ ಆಸರೆಯಾಗಿದ್ದ ರಾಸ್ ಟೇಲರ್ 69 ರನ್ ಸಿಡಿಸಿ ಔಟಾದರು.

ಟಾಮ್ ಲಾಥಮ್ 12  ರನ್ ಸಿಡಿಸಿ ನಿರ್ಗಮಿಸಿದರೆ, ಹೋರಾಟ ನೀಡಿದ ಕೇನ್ ವಿಲಿಯಮ್ಸನ್ 148 ರನ್ ಸಿಡಿಸಿದರು. ಕಾಲಿನ್ ಡೆ ಗ್ರ್ಯಾಂಡ್‌ಹೊಮ್ಮೆ 16 ರನ್ ಗಳಿಸಿ ಔಟಾದರು. ಜೇಮ್ಸ್ ನೀಶನ್ 28 ರನ್ ಕಾಣಿಕೆ ನೀಡಿದರು. ಇದರೊಂದಿಗೆ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 291 ರನ್ ಸಿಡಿಸಿತು.