ಮುಂಬೈ(ಜೂ.29): ವಿಶ್ವಕಪ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಯಾರು ಸೆಮಿಫೈನಲ್ ಪ್ರವೇಶಿಸುತ್ತಾರೆ?ಯಾರು ಫೈನಲ್‌ಗೆ ಲಗ್ಗೆ ಇಡುತ್ತಾರೆ ಅನ್ನೋ ಲೆಕ್ಕಾಚಾರಗಳು ಜೋರಾಗಿದೆ. ಇದರ ಬೆನ್ನಲ್ಲೇ ಪ್ರತಿ ಪಂದ್ಯದ ಮೇಲೆ ಬೆಟ್ಟಿಂಗ್ ಕೂಡ ಅಷ್ಟೇ  ಚುರುಕಾಗಿ ನಡೆಯುತ್ತಿದೆ. ಇದೀಗ ಮುಂಬೈನ  ಈಸ್ಟ್ ದಾದರ್‌ನಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ಜಾಲವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಬೆಟ್ಟಿಂಗ್ ದಂಧೆಕೋರರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಖಾಸಗಿ  ಹೊಟೆಲ್ ಒಂದರಲ್ಲಿ ಬೆಟ್ಟಿಂಗ್ ಕೋರರು ಹಾಗೂ ಸಬ್ ಇನ್ಸ್‌ಪೆಕ್ಟರ್  ಗ್ಯಾನೇಶ್ವರ್ ಖಾರ್ಮತ್  ಅರೆಸ್ಟ್ ಆಗಿದ್ದಾರೆ.  ಬಂಧಿತರಿಂದ 1.93 ಕೋಟಿ ರೂಪಾಯಿ ನಗದು, ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ.

ಅರೆಸ್ಟ್ ಆಗಿರುವ ನಾಲ್ವರು ಬಂಧಿತರನ್ನು ಮುಂಬೈನ ಭೋಯಿವಾಡಾ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಬಳಿಕ ಜಾಮೀನು ಮೂಲಕ ಬಿಡುಗಡ ಮಾಡಲಾಗಿದೆ. ಬಂಧಿತ ಸಬ್‌ಇನ್ಸ್‌ಪೆಕ್ಟರ್‌ನ್ನು ಅಮಾನತು ಮಾಡಲಾಗಿದೆ. ನಗರದಲ್ಲಿ ಸದ್ದಿಲ್ಲದೆ ಬೆಟ್ಟಿಂಗ್ ಜಾಲ ಕಾರ್ಯನಿರ್ವಹಿಸುತ್ತಿದೆ. ಬೆಟ್ಟಿಂಗ್ ಜಾಲದ ವಿರುದ್ದ ಈಗಾಗಲೇ ಮುಂಬೈ ಪೊಲೀಸ್ ಕಾರ್ಯಚರಣೆ ಮಾಡುತ್ತಿದೆ  ಎಂದು ದಕ್ಷಿಣ ಮುಂಬೈನ ಬೈಕುಲಾ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಭರತ್ ಭೊಯ್ಟೆ ಹೇಳಿದ್ದಾರೆ.