ನಾಟಿಂಗ್’ಹ್ಯಾಮ್[ಮೇ.31]: ಕ್ರಿಸ್ ಗೇಲ್ ಸಿಡಿಲಬ್ಬರದ ಅರ್ಧಶತಕ[50 ರನ್, 34 ಎಸೆತ] ಹಾಗೂ ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಶುಭಾರಂಭ ಮಾಡಿದ್ದು, ಪಾಕಿಸ್ತಾನ ತಂಡವನ್ನು ಇನ್ನೂ 36 ಓವರ್’ಗಳು ಬಾಕಿ ಇರುವಂತೆಯೇ ಕೆರಿಬಿಯನ್ ಪಡೆ 7 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದೆ. ಈ ಸೋಲಿನೊಂದಿಗೆ ಪಾಕ್ ಸತತ 11ನೇ ಸೋಲಿನ ಕಹಿ ಉಂಡಂತೆಯಾಗಿದೆ.

ಪಾಕಿಸ್ತಾನ ನೀಡಿದ್ದ 106 ರನ್ ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್ ಗೆ ಕ್ರಿಸ್ ಗೇಲ್, ಶೈ ಹೋಪ್ ಜೋಡಿ 4.3 ಓವರ್ ಗಳಲ್ಲಿ 36 ರನ್ ಬಾರಿಸಿತು. ಹೋಪ್ 11 ರನ್ ಬಾರಿಸಿ ಮೊಹಮ್ಮದ್ ಅಮೀರ್ ಗೆ ಮೊದಲ ಬಲಿಯಾದರೆ, ಡೇರನ್ ಬ್ರಾವೋ ಶೂನ್ಯ ಸುತ್ತಿ ಅಮೀರ್ ಗೆ ಎರಡನೇ ಬಲಿ ಯಾದರು. ಇನ್ನು ನಿರ್ಭಯವಾಗಿ ಬ್ಯಾಟ್ ಬೀಸಿದ ಗೇಲ್ ಮೂರನೇ ಓವರ್’ನ ಎರಡನೇ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಬರೆದರು. ಈ ಮೊದಲು ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ತಲಾ 37 ಸಿಕ್ಸರ್ ಸಿಡಿಸಿದ್ದರು. ನಂತರವೂ ಭರ್ಜರಿ ಬ್ಯಾಟಿಂಗ್ ನಡೆಸಿದ ಗೇಲ್ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ  ಏಕದಿನ ಕ್ರಿಕೆಟ್’ನಲ್ಲಿ ಸತತ 6 ಅರ್ಧಶತಕ ಸಿಡಿಸಿದ 7ನೇ ಕ್ರಿಕೆಟಿಗ ಎನ್ನುವ ಗೌರವಕ್ಕೂ ಗೇಲ್ ಪಾತ್ರರಾದರು. ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಗೇಲ್ ಅಮೀರ್’ಗೆ ಮೂರನೇ ಬಲಿಯಾದರು.

ಗೇಲ್ ವಿಕೆಟ್ ಬಿದ್ದರೂ ಧೃತಿಗೆಡದ ವಿಂಡೀಸ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕೇವಲ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 34 ರನ್ ಬಾರಿಸುವುದರೊಂದಿಗೆ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು.  

ಇದಕ್ಕೂ ಮೊದಲು ಕೆರಿಬಿಯನ್ ದಾಳಿಗೆ ಪಾಕಿಸ್ತಾನ ಅಕ್ಷರಶಃ ನಲುಗಿ ಹೋಯಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಕೇವಲ 105 ರನ್’ಗಳಿಗೆ ಸರ್ವಪತನ ಕಂಡು ಮುಖಭಂಗ ಅನುಭವಿಸಿತು. ಫಖರ್ ಜಮಾನ್, ಬಾಬರ್ ಅಜಂ ತಲಾ 22 ಹಾಗೂ ಮೊಹಮ್ಮದ್ ಹಫೀಜ್[16] ಮತ್ತು ವಹಾಬ್ ರಿಯಾಜ್ ಹೊರತುಪಡಿಸಿ ಉಳಿದ್ಯಾವ ಪಾಕಿಸ್ತಾನದ ಬೌಲರ್’ಗಳು ಎರಡಂಕಿ ಮೊತ್ತ ಮುಟ್ಟಲು ಸಫಲರಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್: 

ಪಾಕಿಸ್ತಾನ: 105/10

ಫಖರ್ ಜಮಾನ್: 22

ಓಶಾನೆ ಥಾಮಸ್ 27/4

ವೆಸ್ಟ್ ಇಂಡೀಸ್: 108/3

ಕ್ರಿಸ್ ಗೇಲ್: 50

ಮೊಹಮ್ಮದ್ ಅಮೀರ್: 26/3