ಮ್ಯಾಂಚೆಸ್ಟರ್(ಜೂ.16): ಪಾಕಿಸ್ತಾನ ವಿರುದ್ಧ ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದೆ. ರೋಹಿತ್ ಶರ್ಮಾ ಶತಕ, ಕೆಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 336 ರನ್ ಸಿಡಿಸಿದೆ. ಇದರೊಂದಿಗೆ ಪಾಕಿಸ್ತಾನಕ್ಕೆ ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 136 ರನ್ ಜೊತೆಯಾಟ ನೀಡಿತು. ರಾಹುಲ್ 57 ರನ್ ಸಿಡಿಸಿ ಔಟಾದರು. ಇತ್ತ ಬ್ಯಾಟಿಂಗ್ ಮುಂದುವರಿಸಿದ ರೋಹಿತ್ ಶರ್ಮಾ ಶತಕ ದಾಖಲಿಸಿದರು. ಏಕದಿನ ಕ್ರಿಕೆಟ್‌ನಲ್ಲಿ 24ನೇ ಹಾಗೂ 2019ರ ವಿಶ್ವಕಪ್‌ನಲ್ಲಿ 2ನೇ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು.

ರೋಹಿತ್ 140 ರನ್ ಸಿಡಿಸಿ ಔಟಾದರು. ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. 57 ರನ್ ಪೂರೈಸುತ್ತಿದ್ದಂತೆ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 11,000 ರನ್ ಸಿಡಿಸಿದ ಸಾಧನೆ ಮಾಡಿದರು. 

ಇತ್ತ ಬೌಂಡರಿ ಸಿಕ್ಸರ್ ಮೂಲಕ ಆರ್ಭಟಿಸಿದ ಹಾರ್ದಿಕ್ 19 ಎಸೆತದಲ್ಲಿ 26 ರನ್ ಸಿಡಿಸಿ ಔಟಾದರು. ಎಂ.ಎಸ್.ಧೋನಿ 
ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಭಾರತ 46.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 305 ರನ್ ಸಿಡಿಸಿತ್ತು. ಅಷ್ಟರಲ್ಲೇ ಸುರಿದ ಮಳೆಯಿಂದ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. 

ಹೆಚ್ಚು ಸಮಯ ವಿಳಂಬವಾಗದ ಕಾರಣ ಓವರ್ ಕಡಿತಗೊಂಡಿಲ್ಲ. ಆದರೆ ಇನ್ನಿಂಗ್ಸ್ ಬ್ರೇಕ್ ಸಮಯದಲ್ಲಿ ಕಡಿತಮಾಡಲಾಯಿತು. ಪಂದ್ಯ ಪುನರ್ ಆರಂಭಗೊಂಡ ಬೆನ್ನಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಪತನಗೊಂಡಿತು. ಕೊಹ್ಲಿ 77 ರನ್  ಸಿಡಿಸಿ ಔಟಾದರು. ವಿಜಯ್ ಶಂಕರ್ ಅಜೇಯ 15 ರನ್ ಹಾಗೂ ಕೇದಾರ್ ಜಾಧವ್  ಅಜೇಯ 9 ರನ್ ಸಿಡಿಸಿದರು. ಈ ಮೂಲಕ ಭಾರತ 5 ವಿಕೆಟ್ ನಷ್ಟಕ್ಕೆ 336 ರನ್  ಸಿಡಿಸಿತು.