ಟ್ರೆಂಟ್‌ಬ್ರಿಡ್ಜ್[ಜೂ.13]: ಭಾರತ-ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಪಂದ್ಯಕ್ಕೆ ಕ್ಷಣಗಣಣೆ ಆರಂಭವಾಗಿದ್ದು, ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಜೋರಾಗಿದೆ.

ಈಗಾಗಲೇ ಆಡಿದ ಮೂರು ಪಂದ್ಯಗಳಲ್ಲೂ ಜಯಭೇರಿ ಬಾರಿಸಿ ಬೀಗುತ್ತಿರುವ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡಕ್ಕೆ ಕೊಹ್ಲಿ ಪಡೆ ಶಾಕ್ ನೀಡಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಸೋಲಿನ ರುಚಿ ತೋರಿಸಿತ್ತು. ಇದೀಗ ಬಲಿಷ್ಠ ಕಿವೀಸ್ ತಂಡಕ್ಕೆ ಆಘಾತ ನೀಡಲು ವಿರಾಟ್ ಪಡೆ ಸಜ್ಜಾಗಿದೆ.

ವಿಶ್ವಕಪ್ 2019: ಭಾರತದ ಹ್ಯಾಟ್ರಿಕ್‌ಗೆ ವರುಣನ ಕೃಪೆ?

ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ: ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ ಇದೀಗ ಟೀಂ ಇಂಡಿಯಾದಲ್ಲಿ 2 ಬದಲಾವಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಯಾಕೆಂದರೆ, ಶಿಖರ್ ಧವನ್ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ವಿಶ್ರಾಂತಿ ಬಯಸಿದ್ದಾರೆ. ಹೀಗಾಗಿ ಶಿಖರ್ ಸ್ಥಾನಕ್ಕೆ ಮೀಸಲು ಆರಂಭಿಕನಾಗಿ ಸ್ಥಾನ ಪಡೆದಿರುವ ಕೆ.ಎಲ್ ರಾಹುಲ್ ಮುಂಬಡ್ತಿ ಪಡೆಯಲಿದ್ದಾರೆ. ಇದರಿಂದಾಗಿ ನಾಲ್ಕನೇ ಕ್ರಮಾಂಕದಲ್ಲಿ ವಿಜಯ್ ಶಂಕರ್ ಇಲ್ಲವೇ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಅನುಭವಿ ಕಾರ್ತಿಕ್’ಗೆ ಕೊಹ್ಲಿ ಮಣೆಹಾಕುತ್ತಾರೋ, ಇಲ್ಲವೇ ಯುವ ಆಲ್ರೌಂಡರ್ ವಿಜಯ್ ಶಂಕರ್ ವಿಶ್ವಕಪ್ ಟೂರ್ನಿಗೆ ಪದಾರ್ಪಣೆ ಮಾಡುತ್ತಾರೋ ಎನ್ನುವುದು ಇದೀಗ ಸದ್ಯದ ಕುತೂಹಲ.   

ಇನ್ನು ಟ್ರೆಂಟ್‌ ಬ್ರಿಡ್ಜ್‌ ಮೈದಾನ ಉತ್ತಮ ಬೌನ್ಸ್‌ ಪಿಚ್‌ ಆಗಿರುವುದರಿಂದ ಮೂವರು ತಜ್ಞ ವೇಗಿಗಳೊಂದಿಗೆ ವಿರಾಟ್ ಕಣಕ್ಕಿಳಿದರೆ ಅಚ್ಚರಿಪಡಬೇಕಿಲ್ಲ. ಒಂದು ವೇಳೆ ಮೂರನೇ ವೇಗಿಯಾಗಿ ಮೊಹಮ್ಮದ್ ಶಮಿ ಕಣಕ್ಕಿಳಿದರೆ, ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಯಾಕೆಂದರೆ ಕಳೆದೆರಡು ಪಂದ್ಯಗಳಲ್ಲಿ ಕುಲ್ದೀಪ್ 101 ರನ್ ನೀಡಿ ಕೇವಲ 1 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಕುಲ್ದೀಪ್ ಹೊರಗುಳಿಯುವ ಸಾಧ್ಯತೆಯಿದೆ. ಇದನ್ನು ಹೊರತು ಪಡಿಸಿ ವಿಜಯ್ ಶಂಕರ್, ಕಾರ್ತಿಕ್ ಅವರಿಗೆ ಸ್ಥಾನ ನೀಡದೇ ಇದ್ದರೆ, ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿಯಬಹುದು. ಹೀಗಾದರೆ, ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ನೆರವಾಗಬಲ್ಲ ರವೀಂದ್ರ ಜಡೇಜಾಗೆ ಅವಕಾಶ ಸಿಕ್ಕರೂ ಆಶ್ಚರ್ಯ ಪಡಬೇಕಿಲ್ಲ.

ಸಂಭಾವ್ಯ ತಂಡ ಹೀಗಿದೆ:
ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ವಿಜಯ್‌ ಶಂಕರ್‌/ದಿನೇಶ್ ಕಾರ್ತಿಕ್, ಎಂ.ಎಸ್‌.ಧೋನಿ, ಹಾರ್ದಿಕ್‌ ಪಾಂಡ್ಯ, ಕೇದಾರ್‌ ಜಾಧವ್‌, ಕುಲ್ದೀಪ್‌ ಯಾದವ್‌/ಮೊಹಮ್ಮದ್ ಶಮಿ, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಹಲ್‌, ಜಸ್ಪ್ರೀತ್ ಬುಮ್ರಾ.