ಮ್ಯಾಂಚೆಸ್ಟರ್(ಜೂ.27): ಟೀಂ ಇಂಡಿಯಾ ಬೌಲರ್‌ಗಳ ಅದ್ಭುತ ಪ್ರದರ್ಶನಕ್ಕೆ ವೆಸ್ಟ್ ಇಂಡೀಸ್ ತಲೆಬಾಗಿದೆ. ವೆಸ್ಟ್ ಇಂಡೀಸ್ ವಿರುದ್ದದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 125 ರನ್ ಗೆಲುವು ಸಾಧಿಸಿದೆ. ಇದರೊಂದಿಗೆ 11 ಅಂಕ ಸಂಪಾದಿಸಿರುವ ವಿರಾಟ್ ಕೊಹ್ಲಿ ಸೈನ್ಯದ ಸೆಮಿಫೈನಲ್ ಹಾದಿ ಮತ್ತಷ್ಟು ಸುಲಭವಾಗಿದೆ. ಇನ್ನೊಂದು ಗೆಲುವು ಭಾರತದ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಲಿದೆ.

269 ರನ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತೀಯ ಬೌಲರ್‌ಗಳು ಇನ್ನಿಲ್ಲದಂತೆ ಕಾಡಿದರು. ವಿಂಡೀಸ್ ತಂಡದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದರು. ಕ್ರಿಸ್ ಗೇಲ್ ಎಚ್ಚರಿಕೆಯ ಹೆಜ್ಜೆ ಇಟ್ಟರೂ ವಿಕೆಟ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗೇಲ್ 19 ಎಸೆತ ಎದುರಿಸಿ 6 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಶೈ ಹೋಪ್ 5 ರನ್ ಸಿಡಿಸಿ ಔಟಾದರು.

ತಂಡದಲ್ಲಿ ಸ್ಥಾನ ಪಡೆದ ಸುನಿಲ್ ಆ್ಯಂಬ್ರಿಸ್ 36 ರನ್ ಕಾಣಿಕೆ ನೀಡಿದರು. ನಿಕೋಲಸ್ ಪೂರನ್ 28 ರನ್ ಸಿಡಿಸಿ ಔಟಾದರು. ಸುನಿಲ್ ಹಾಗೂ ನಿಕೋಲಸ್ ಹೊರತು ಪಡಿಸಿದರೆ ಇತರ ಯಾವ ಬ್ಯಾಟ್ಸ್‌ಮನ್ ಕೂಡ 20 ರನ್ ಗಡಿ ದಾಟಲಿಲ್ಲ. ನಾಯಕ ಜಾಸನ್ ಹೋಲ್ಡರ್, ಕಾರ್ಲೋಸ್ ಬ್ರಾಥ್ವೈಟ್ ಹಾಗೂ ಫ್ಯಾಬಿಯನ್ ಆಲೆನ್ ಅಬ್ಬರಿಸಲಿಲ್ಲ.  

ಶಿಮ್ರೊನ್ ಹೆಟ್ಮೆಯರ್ 18 ರನ್ ಸಿಡಿಸಿ ಔಟಾದರು. ಶೆಲ್ಡಾನ್ ಕಾಟ್ರೆಲ್ 10 ರನ್ ಸಿಡಿಸಿ ಔಟಾದರು. ಕೇಮರ್ ರೋಚ್ ಅಜೇಯ 14 ರನ್ ಸಿಡಿಸಿದರೆ. ಒಶಾನೆ ಥಾಮಸ್ 6 ರನ್ ಸಿಡಿಸಿ ಔಟಾದರು. ಈ ಮೂಲಕ ವೆಸ್ಟ್ ಇಂಡೀಸ್ 34.2 ಓವರ್‌ಗಳಲ್ಲಿ 143 ರನ್‌ಗೆ ಆಲೌಟ್ ಆಯಿತು. ಭಾರತ 125 ರನ್ ಗೆಲುವು ಸಾಧಿಸಿತು. ಭಾರತದ ಪರ ಮೊಹಮ್ಮದ್ ಶಮಿ 4, ಜಸ್ಪ್ರೀತ್ ಬುಮ್ರಾ 2, ಯಜುವೇಂದ್ರೆ ಚಹಾಲ್ 2 ಹಾಗೂ ಕುಲ್ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಕಬಳಿಸಿದರು.

ಈ ಸೋಲಿನಿಂದ ವೆಸ್ಟ್ ಇಂಡೀಸ್ ತಂಡದ ಸೆಮಿಫೈನಲ್ ಹೋರಾಟ ಅಂತ್ಯವಾಗಿದೆ. ಭಾರತ 11 ಅಂಕ ಸಂಪಾದಿಸಿದ್ದು ಬಹುತೇಕ ಸೆಮಿಫೈನಲ್ ಸ್ಥಾನ ಸಂಪಾದಿಸಿದೆ. ಸೆಮೀಸ್ ಸ್ಥಾನ ಭದ್ರಪಡಿಸಿಕೊಳ್ಳಲು ಭಾರತಕ್ಕೆ ಇನ್ನೊಂದು ಅಂಕ ಅಗತ್ಯವಿದೆ.