ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು; ಸೆಮೀಸ್‌ನಲ್ಲಿ ಭಾರತದ ಎದುರಾಳಿ ಯಾರು?
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವಿನೊಂದಿಗೆ ಲೀಗ್ ಪಂದ್ಯ ಮುಗಿಸಿದೆ. ಶ್ರೀಲಂಕಾ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿದ ಭಾರತ, ಇದೀಗ ಸೆಮಿಫೈನಲ್ ಪಂದ್ಯದತ್ತ ಚಿತ್ತ ಹರಿಸಿದೆ. ರೋಹಿತ್ ಶರ್ಮಾ ಹಾಗೂ ರಾಹುಲ್ ಸೆಂಚುರಿ ಭಾರತಕ್ಕೆ ಸುಲುಭ ಗೆಲುವು ತಂದುಕೊಟ್ಟಿತು.
ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...
ಲೀಡ್ಸ್(ಜು.06): ಶ್ರೀಲಂಕಾ ವಿರುದ್ಧದ ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ ಭಾರತದ ಅಗ್ರಪಟ್ಟ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಇತ್ತ ಶ್ರೀಲಂಕಾ ಸೋಲಿನೊಂದಿಗೆ ವಿಶ್ವಕಪ್ ಟೂರ್ನಿಗೆ ಗುಡ್ ಬೈ ಹೇಳಿತು.
ಗೆಲುವಿಗೆ 265 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 189 ರನ್ ಜೊತೆಯಾಟ ನೀಡೋ ಮೂಲಕ ದಾಖಲೆ ಬರೆಯಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಶತಕ ಸಿಡಿಸಿ ಮಿಂಚಿದರು. ರೋಹಿತ್ ವಿಶ್ವಕಪ್ ಟೂರ್ನಿಯಲ್ಲಿ 5ನೇ ಸೆಂಚುರಿ ಪೂರೈಸಿ, ಶ್ರೀಲಂಕಾದ ಕುಮಾರ ಸಂಗಕ್ಕಾರ ದಾಖಲೆ ಪುಡಿ ಮಾಡಿದರು.
ರೋಹಿತ್ ಶತಕ ಸಿಡಿಸಿದ ಬೆನ್ನಲ್ಲೇ ವಿಕೆಟ್ ಕೈಚೆಲ್ಲಿದರು. ರೋಹಿತ್ 103 ರನ್ ಸಿಡಿಸಿ ಔಟಾದರು. ಇತ್ತ ರಾಹುಲ್ ಅಬ್ಬರ ಮುಂದುವರಿಸಿದರು. ನಾಯಕ ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಮುಂದುವರಿಸಿದ ರಾಹುಲ್ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸೆಂಚುರಿ ಸಿಡಿಸಿದರು. ರಾಹುಲ್ 111 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ರಿಷಬ್ ಪಂತ್ ವಿಕೆಟ್ ಪತನಗೊಂಡಿತು.
ಕೊಹ್ಲಿ ಅಜೇಯ 34 ರನ್ ಹಾಗೂ ಹಾರ್ದಿಕ್ ಪಾಂಡ್ಯ 7 ರನ್ ನೆರವಿನಿಂದ ಟೀಂ ಇಂಡಿಯಾ 44. 3ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಸಿತು. ಭರ್ಜರಿ 7 ವಿಕೆಟ್ ಗೆಲುವಿನೊಂದಿಗೆ ಟೀಂ ಇಂಡಿಯಾ ಲೀಗ್ ಪಂದ್ಯ ಮುಗಿಸಿದೆ. ಇದೀಗ ಸೆಮಿಫೈನಲ್ ಪಂದ್ಯದತ್ತ ಚಿತ್ತ ಹರಿಸಿದೆ. ಶ್ರೀಲಂಕಾ ಸೋಲಿನೊಂದಿಗೆ ಟೂರ್ನಿಗೆ ಗುಡ್ ಬೈ ಹೇಳಿತು.
ಭಾರತ 15 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದೆ . 14 ಅಂಕ ಸಂಪಾದಿಸಿರುವ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ವಿರುದ್ದ ಗೆಲುವು ಸಾಧಿಸಿದರೆ, ಮತ್ತೆ ಭಾರತವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದೆ. ಹೀಗಾದಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಹೋರಾಟ ನಡೆಸಿದರೆ, ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ವಿರುದ್ಧ ಹೋರಾಟ ನಡೆಸಲಿದೆ. ಆದರೆ ಸೌತ್ ಆಫ್ರಿಕಾ ವಿರುದ್ದ ಆಸ್ಟ್ರೇಲಿಯಾ ಸೋಲು ಅನುಭವಿಸಿದರೆ, ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ ಹಾಗೂ ಆಸ್ಟ್ರೇಲಿಯಾಗೆ ಇಂಗ್ಲೆಂಡ್ ಎದುರಾಳಿಯಾಗಲಿದೆ.