ಚೆಸ್ಟರ್ ಲೆ ಸ್ಟ್ರೀಟ್(ಜು.01): 2019ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಇದೇ ಮೊದಲ ಬಾರಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಸದಾ ಆರಂಭಿಕರ ಹಿನ್ನಡೆ, ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಕಂಗಾಲಾಗುತ್ತಿದ್ದ ಲಂಕಾ, ವೆಸ್ಟ್ ಇಂಡೀಸ್ ವಿರುದ್ಧ ದಿಟ್ಟ ಹೋರಾಟ ನೀಡಿದೆ. ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 338 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾಗೆ ನಾಯಕ ದಿಮುತ್ ಕರುಣಾರತ್ನೆ ಹಾಗೂ ಕುಸಾಲ್ ಪರೇರಾ ಉತ್ತಮ ಆರಂಭ ನೀಡಿದರು. ಕರುಣಾರತ್ನೆ 32 ರನ್ ಕಾಣಿಕೆ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 93 ರನ್ ಜೊತೆಯಾಟ ನೀಡಿತು. ಆವಿಶ್ಕಾ ಫರ್ನಾಂಡೋ ಜೊತೆ ಸೇರಿದ ಕುಸಾಲ್, ವಿಂಡೀಸ್ ಬೌಲರ್‌ಗಳನ್ನು ಕಾಡಿದರು. ಕುಸಾಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ಕುಸಾಲ್ ಪರೇರಾ 64 ರನ್ ಸಿಡಿಸಿ ಔಟಾದರು.  ಇತ್ತ ಫರ್ನಾಂಡೋ  ಅರ್ಧಶತಕ ಸಿಡಿಸಿ ಆಸರೆಯಾದರು. ಕುಸಾಲ್ ಮೆಂಡೀಸ್ 39 ರನ್ ಕಾಣಿಕೆ ನೀಡಿದರೆ, ಆ್ಯಂಜಲೋ ಮ್ಯಾಥ್ಯೂಸ್ 26 ರನ್ ಸಿಡಿಸಿ ಔಟಾದರು. ಅವಿಶ್ಕಾ ಫರ್ನಾಂಡೋ ಸೆಂಚುರಿ ಸಿಡಿಸೋ ಮೂಲಕ ದಾಖಲೆ ಬರೆದಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ ಲಂಕಾದ ಮೊದಲ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫರ್ನಾಂಡೋ 104 ರನ್ ಸಿಡಿಸಿ ಔಟಾದರು. ಲಹೀರು ತಿರಿಮನ್ನೆ ಅಜೇಯ 45 ರನ್ ಸಿಡಿಸಿದರು. ಈ ಮೂಲಕ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 338 ರನ್ ಸಿಡಿಸಿತು.