ಲೀಡ್ಸ್(ಜು.06): ಶ್ರೀಲಂಕಾ ವಿರುದ್ಧ ವಿಶ್ವಕಪ್  ಅಂತಿಮ ಲೀಗ್ ಪಂದ್ಯ ಆಡುತ್ತಿರುವ ಭಾರತ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದೆ. ಆ್ಯಂಜಲೋ ಮ್ಯಾಥ್ಯೂಸ್ ಶತಕ ಹಾಗೂ ಲಹೀರು ತಿರಿಮನ್ನೆ ಹಾಫ್ ಸೆಂಚುರಿ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ 7 ವಿಕೆಟ್ ನಷ್ಟಕ್ಕೆ 264 ರನ್ ಸಿಡಿಸಿದೆ. ಇದೀಗ ಟೀಂ ಇಂಡಿಯಾ ಗೆಲುವಿಗೆ 265 ರನ್ ಟಾರ್ಗೆಟ್ ಬೆನ್ನಟ್ಟಬೇಕಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಕುಂಟುತ್ತಾ ಸಾಗಿತು. ನಾಯಕ ದಿಮುತ್ ಕರುಣಾರತ್ನೆ, ಕುಸಾಲ್ ಪರೇರಾ ಅಬ್ಬರಿಸಿಲಿಲ್ಲ. ಭರ್ಜರಿ ಫಾರ್ಮ್‌ನಲ್ಲಿದ್ದ ಆವಿಶ್ಕಾ ಫರ್ನಾಂಡೋ 18 ರನ್ ಸಿಡಿಸಿ ಔಟಾದರು. ಕುಸಾಲ್ ಮೆಂಡೀಸ್ 3 ರನ್‌ಗೆ ಸುಸ್ತಾದರು. ಆದರೆ ಆ್ಯಂಜಲೋ ಮ್ಯಾಥ್ಯೂಸ್ ಹಾಗೂ ಲಹೀರು ತಿರಿಮನ್ನೆ ಜೊತೆಯಾಟ ಲಂಕಾ ತಂಡಕ್ಕೆ ಚೇತರಿಕೆ ನೀಡಿತು.

ಮ್ಯಾಥ್ಯೂಸ್ ಹಾಗೂ ತಿರಿಮನ್ನೆ ಅರ್ಧಶತಕ ಸಿಡಿಸಿದರು. ತಿರಿಮನ್ನೆ 53 ರನ್ ಸಿಡಿಸಿ ಔಟಾದರು. ಸತತ ವೈಫಲ್ಯ ಅನುಭವಿಸಿದ್ದ ಮ್ಯಾಥ್ಯೂಸ್ ಏಕದಿನ ಕ್ರಿಕೆಟ್‌ನಲ್ಲಿ 3ನೇ ಸೆಂಚುರಿ ಪೂರೈಸಿದರು. ಮ್ಯಾಥ್ಯೂಸ್ ಸಿಡಿಸಿದ 3 ಶತಕ ಟೀಂ ಇಂಡಿಯಾ ವಿರುದ್ಧ ಅನ್ನೋದೇ ವಿಶೇಷ. ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಸೆಂಚುರಿ ಸಿಡಿಸಿದ 2ನೇ ಲಂಕಾ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು  2011ರ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಮಹೇಲಾ ಜಯವರ್ದನೆ ಸೆಂಚುರಿ ಸಿಡಿಸಿದ್ದರು. 

ಮ್ಯಾಥ್ಯೂಸ್ 113 ರನ್ ಸಿಡಿಸಿ ಔಟಾದರು. ಧನಂಜಯ್ ಡಿಸಿಲ್ವಾ ಸಿಡಿಸಿದ ರನ್ ನೆರವಿನಂದ ಶ್ರೀಲಂಕಾ 7 ವಿಕೆಟ್ ನಷ್ಟಕ್ಕೆ 264 ರನ್ ಸಿಡಿಸಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಬಳಿಸಿ ಮಿಂಚಿದರು.