ಚೆಸ್ಟರ್ ಲೆ ಸ್ಟ್ರೀಟ್(ಜು.01): ವೆಸ್ಟ್ ಇಂಡೀಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ರೋಚಕ ಗೆಲುವು ಸಾಧಿಸಿದೆ.  ವಿಂಡೀಸ್ ವಿರುದ್ಧ ಬೃಹತ್ ಮೊತ್ತ ಪೇರಿಸಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಲಂಕಾ ತಂಡಕ್ಕೆ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ 118 ರನ್ ಸಿಡಿಸಿ ಶಾಕ್ ನೀಡಿದ್ದರು. ಆದರೆ ಅಂತಿಮ ಹಂತದಲ್ಲಿ ಲಂಕಾ ಬೌಲರ್‌ಗಳ ಕರಾರುವಕ್ ದಾಳಿಗೆ ವಿಂಡೀಸ್ ಸೋಲೊಪ್ಪಿಕೊಂಡಿತು.  ಮೂಲಕ ಲಂಕಾ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ. ಆದರೆ ಲಂಕಾಗೆ ಗೆಲುವಿನ ಜೊತೆಗೆ ಅದೃಷ್ಠ ಕೂಡ ಕೈ ಹಿಡಿದರೆ ಮಾತ್ರ ಸೆಮೀಶ್ ಪ್ರವೇಶ ಸಾಧ್ಯವಿದೆ.

ಗೆಲುವಿಗೆ 339 ರನ್ ಬೃಹತ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್, 22 ರನ್ ಗಳಿಸುವಷ್ಟರಲ್ಲೆ 2 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಸುನಿಲ್ ಆ್ಯಂಬ್ರಿಸ್ ಹಾಗೂ ಶೈ ಹೋಪ್ 5 ರನ್‌ ಸಿಡಿಸಿ ಔಟಾದರು. ಕ್ರಿಸ್ ಗೇಲ್ 35 ರನ್ ಕಾಣಿಕೆ ನೀಡಿದರು. ಶಿಮ್ರೊನ್ ಹೆಟ್ಮೆಯರ್ 29 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು.

ನಿಕೋಲಸ್ ಪೂರನ್ ಹೋರಾಟ ವೆಸ್ಟ್ ಇಂಡೀಸ್ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿತು. ನಾಯಕ ಜಾಸನ್ ಹೋಲ್ಡರ್ 26 ರನ್ ಸಿಡಿಸಿ ಔಟಾದರೆ, ಕಾರ್ಲೋಸ್ ಬ್ರಾಥ್ವೈಟ್ ಕೇವಲ 8 ರನ್ ಸಿಡಿಸಿ ಔಟಾದರು. ಫ್ಯಾಬಿಯನ್ ಅಲನ್ ಜೊತೆ ಸೇರಿದ ನಿಕೋಲಸ್ ಪೂರನ್, ಶ್ರೀಲಂಕಾ ತಂಡದ ತಲೆ ನೋವು ಹೆಚ್ಚಿಸಿದರು.

ಪೂರನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರೆ , ಅಲೆನ್ ಉತ್ತಮ ಸಾಥ್ ನೀಡಿದರು. ಆದರೆ ಅಲೆನ್ 51 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಇತ್ತ ಪೂರನ್ ಆಕರ್ಷಕ ಸೆಂಚುರಿ ಸಿಡಿಸಿ, ವಿಂಡೀಸ್ ತಂಡಕ್ಕೆ ನೆರವಾದರು. ಅಂತಿಮ ಹಂತದಲ್ಲಿ ಶ್ರೀಲಂಕಾ ಹಲವು ಕ್ಯಾಚ್ ಕೈಚೆಲ್ಲಿತು. ಪೂರನ್ ಅಬ್ಬರಿಂದ ವೆಸ್ಟ್ ಇಂಡೀಸ್ ಗೆಲುವಿಗೆ ಅಂತಿಮ 18 ಎಸೆತದಲ್ಲಿ 31 ರನ್ ಬೇಕಿತ್ತು.

118 ರನ್ ಸಿಡಿಸಿದ  ಪೂರನ್, ಆ್ಯಂಜಲೋ ಮ್ಯಾಥ್ಯೂಸ್ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ಅಷ್ಟರಲ್ಲೇ ಶ್ರೀಲಂಕಾ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿತು. ಒಶಾನೆ ಥೋಮಸ್ ಎಲ್‌ಬಿ ಬಲೆಗೆ ಬಿದ್ದರು. ವೆಸ್ಟ್ ಇಂಡೀಸ್ 9 ವಿಕೆಟ್ ನಷ್ಟಕ್ಕೆ 315 ರನ್ ಸಿಡಿಸಿತು. ಈ ಮೂಲಕ ಶ್ರೀಲಂಕಾ 23 ರನ್ ಗೆಲುವು ಸಾಧಿಸಿತು.