ಮ್ಯಾಂಚೆಸ್ಟರ್(ಜು.06): ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಅಬ್ಬರಿಸಿದೆ. ಕಳಪೆ ಬ್ಯಾಟಿಂಗ್ ಬ್ಯಾಟಿಂಗ್ ಪ್ರದರ್ಶನದಿಂದ ಕಂಗೆಟ್ಟಿದ್ದ ಸೌತ್ ಆಫ್ರಿಕಾ ಕೊನೆಯ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದೆ. ನಾಯಕ ಫಾಫ್ ಡುಪ್ಲೆಸಿಸ್ ಸೆಂಚುರಿ ಹಾಗೂ ವ್ಯಾಂಡರ್ ಡಸ್ಸೆನ್ 95 ರನ್  ನೆರವಿನಿಂದ ಸೌತ್ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 325 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೌತ್ ಆಫ್ರಿಕಾ ಉತ್ತಮ ಆರಂಭ ಪಡೆಯಿತು. ಆ್ಯಡೆನ್ ಮಕ್ರಂ ಹಾಗೂ ಕ್ವಿಂಟನ್ ಡಿಕಾಕ್ 79 ರನ್ ಜೊತೆಯಾಟ ನೀಡಿದರು. ಮಕ್ರಂ 34 ರನ್ ಸಿಡಿಸಿ ಔಟಾದರು. ಡಿಕಾಕ್ ಹಾಫ್ ಸೆಂಚುರಿ ಸಿಡಿಸಿದರು. ನಾಯಕ ಫಾಫ್ ಡುಪ್ಲೆಸಿಸ್ ಜೊತೆ ಬ್ಯಾಟಿಂಗ್ ಮುಂದುವರಿಸಿದ ಡಿಕಾಕ್ 52 ರನ್ ಕಾಣಿಕೆ ನೀಡಿದರು.

ಡುಪ್ಲೆಸಿಸ್ ಹಾಗೂ ರಸಿ ವ್ಯಾಂಡರ್ ಡಸ್ಸೆನ್ ಜೊತೆಯಾಟ ಸೌತ್ ಆಫ್ರಿಕಾ ತಂಡ ನೆರವಾಯಿತು. ಡುಪ್ಲೆಸಿಸ್ ಭರ್ಜರಿ ಶತಕ ಸಿಡಿಸಿದರು. ಈ ವಿಶ್ವಕಪ್ ಟೂರ್ನಿಯಲ್ಲಿ ಡುಪ್ಲೆಸಿಸ್ ಸಿಡಿಸಿದ ಮೊದಲ ಶತಕ ಇದು. ಡುಪ್ಲೆಸಿಸ್ 100 ರನ್ ಸಿಡಿಸಿ ಔಟಾದರು. ಆದರೆ ಜೆಪಿ ಡುಮಿನಿ ಹಾಗೂ ಡ್ವೇನ್ ಪ್ರೆಟೋರಿಯಸ್ ಅಬ್ಬರಿಸಿಲಿಲ್ಲ.ವ್ಯಾಂಡರ್ ಡಸ್ಸೆನ್ ಅಮೋಘ ಇನ್ನಿಂಗ್ಸ್ ಕಟ್ಟಿದರು. ಡಸ್ಸೆನ್ 95 ರನ್  ಸಿಡಿಸಿದರು. ಈ ಮೂಲಕ ಸೌತ್ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 325 ರನ್ ಸಿಡಿಸಿತು.