ಚೆಸ್ಟರ್-ಲೆ-ಸ್ಟ್ರೀಟ್(ಜೂ.28): ವಿಶ್ವಕಪ್ ಟೂರ್ನಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಸೌತ್ ಆಫ್ರಿಕಾ ಗೆಲುವಿನ ಸಿಹಿ ಕಂಡಿದೆ. ಶ್ರೀಲಂಕಾ ವಿರುದ್ಧದ ಲೀಗ್ ಪಂದ್ಯದಲ್ಲಿ ಸೌತ್ ಆಫ್ರಿಕಾ 9 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ 9ನೇ ಸ್ಥಾನದಲ್ಲಿದ್ದ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಿ 8ನೇ ಸ್ಥಾನಕ್ಕೇರಿದೆ. ಈಗಾಗಲೆ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿರುವ ಸೌತ್ ಆಫ್ರಿಕಾ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ. ಆದರೆ ಈ ಸೋಲಿನಿಂದ ಶ್ರೀಲಂಕಾ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ.

ಗೆಲುವಿಗೆ 204 ರನ್ ಸುಲಭ ಟಾರ್ಗೆಟ್ ಪಡೆದ ಸೌತ್ ಆಫ್ರಿಕಾ ಪ್ರತಿ ಪಂದ್ಯದಂತೆ ಈ ಪಂದ್ಯದಲ್ಲೂ ಉತ್ತಮ ಆರಂಭ ಪಡೆಯಲಿಲ್ಲ. ಕ್ವಿಂಟನ್ ಡಿಕಾಕ್ ಕೇವಲ 15 ರನ್ ಸಿಡಿಸಿ ಔಟಾದರು. ಆದರೆ ಹಶೀಮ್ ಆಮ್ಲಾ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಜೊತೆಯಾಟ ಸೌತ್ ಆಫ್ರಿಕಾ ಗೆಲುವಿನ ಹಾದಿ ಸುಗಮಗೊಳಿಸಿತು.

ಆಮ್ಲಾ ಹಾಗೂ ಡುಪ್ಲೆಸಿಸ್ ಹಾಫ್ ಸೆಂಚುರಿ ಸಿಡಿಸಿದರು. ಇವರಿಬ್ಬರ ಜೊತೆಯಾಟ ಶ್ರೀಲಂಕಾ ಗೆಲುವಿನ ಆಸೆಯನ್ನು ಬುಡಮೇಲು ಮಾಡಿತು. ಆಮ್ಲಾ ಅಜೇಯ 80 ರನ್ ಸಿಡಿಸಿದರೆ, ಡುಪ್ಲೆಸಿಸ್ ಅಜೇಯ 96 ರನ್ ಸಿಡಿಸಿದರು. ಈ ಮೂಲಕ ಸೌತ್ ಆಫ್ರಿಕಾ 37.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಸೌತ್ ಆಫ್ರಿಕಾ ಭರ್ಜರಿ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿತು.