ಕಾರ್ಡಿಫ್(ಜೂ.15): ವಿಶ್ವಕಪ್ ಟೂರ್ನಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಸೌತ್ ಆಫ್ರಿಕಾ ಕೊನೆಗೂ ಗೆಲುವಿನ ನಗೆ ಬೀರಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೌತ್ ಆಫ್ರಿಕಾ 9 ವಿಕೆಟ್ ಗೆಲುವು ದಾಖಲಿಸಿದೆ. ಆದರೆ ಆಫ್ಘಾನಿಸ್ತಾನ ತಂಡದ ಆಡಿದ 4 ರಲ್ಲೂ ಸೋಲು ಕಾಣೋ ಮೂಲಕ ನಿರಾಸೆ ಅನುಭವಿಸಿತು.

ಗೆಲುವಿಗೆ 127 ರನ್ ಸುಲಭ ಟಾರ್ಗೆಟ್ ಪಡೆದ ಸೌತ್ ಆಫ್ರಿಕಾ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿತು. ಸೌತ್ ಆಫ್ರಿಕಾ ರನ್‌ಗಿಂತ ಹೆಚ್ಚು ವಿಕೆಟ್ ಮೇಲೆ ಗಮನ ಕೇಂದ್ರಿಕರಿಸಿತು. ಕ್ವಿಂಟನ್ ಡಿಕಾಕ್ ಹಾಗೂ ಹಶೀಮ್ ಆಮ್ಲಾ ಎಚ್ಚರಿಕೆಯ ಬ್ಯಾಟಿಂಗ್ ಸೌತ್ ಆಫ್ರಿಕಾ ತಂಡದ ಗೆಲುವಿನ ಹಾದಿ ಸುಗಮಗೊಳಿಸಿತು.

ಅಲ್ಪ ಮೊತ್ತದಲ್ಲೂ ಅಫ್ಘಾನಿಸ್ತಾನ ಕಠಿಣ ಹೋರಾಟ ನೀಡಿತು. ಅಂಕ ಹಾಗೂ ರನ್‌ರೇಟ್‌ನಲ್ಲಿ ಪಾತಾಳದಲ್ಲಿದ್ದ ಸೌತ್ ಆಫ್ರಿಕಾ ತಂಡಕ್ಕೆ ಬಹುದೊಡ್ಡ ಅಂತರದ ಗೆಲುವು ಅನಿವಾರ್ಯವಾಗಿತ್ತು. ಇದಕ್ಕೆ ತಕ್ಕಂತೆ ಬ್ಯಾಟ್ ಬೀಸಿದ ಡಿಕಾಕ್ ಆರ್ಧಶತಕ ಸಿಡಿಸಿ ನೆರವಾದರು. ಡಿಕಾಕ್ 68 ರನ್ ಸಿಡಿಸಿ ಔಟಾದರು.

ಹಶೀಮ್ ಅಮ್ಲಾ ಹಾಗೂ ಆಂಡಿಲ್ ಫೆಲುಕ್‌ವಾಯೋ ಜೊತೆಯಾಟ ಸೌತ್ ಆಫ್ರಿಕಾ ಗೆಲುವು ಖಚಿತಪಡಿಸಿತು. ಆಮ್ಲಾ ಅಜೇಯ 41 ರನ್ ಸಿಡಿಸಿದರೆ ಫೆಲುಕ್‌ವಾಯೋ 17 ರನ್ ಸಿಡಿಸಿದರು. ಈ ಮೂಲಕ ಸೌತ್ ಆಫ್ರಿಕಾ 28.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ಸೌತ್ ಆಫ್ರಿಕಾ, ಅಂಕಪಟ್ಟಿಯಲ್ಲಿ ಪಾಕಿಸ್ತಾನ ಹಿಂದಿಕ್ಕಿ 8ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.