ಕರಾಚಿ[ಜೂ.22]: ಸದ್ಯ ನಾವು ಪಾಕಿಸ್ತಾನಕ್ಕಿಂತ ಉತ್ತಮ ತಂಡವನ್ನು ಹೊಂದಿದ್ದೇವೆ ಎಂದು ಆಫ್ಘಾನಿಸ್ತಾನ ತಂಡದ ಹಂಗಾಮಿ ಸಿಇಓ ಅಸಾದುಲ್ಲಾ ಹೇಳಿಕೆಗೆ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೊಯೆಬ್ ಅಖ್ತರ್ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ನಡೆದ ಟಿವಿ ಸಂದರ್ಶನವೊಂದರಲ್ಲಿ, ಪಾಕಿಸ್ತಾನ ತನ್ನ ಕ್ರಿಕೆಟ್ ಕೌಶಲ್ಯ ಹೆಚ್ಚಿಸಿಕೊಳ್ಳಲು ಆಫ್ಘಾನಿಸ್ತಾನದ ಸಲಹೆ ಕೇಳುವುದು ಒಳ್ಳೆಯದು ಎಂದು ಅಸಾದುಲ್ಲಾ ಹೇಳಿದ್ದರು. ನಾವು ಸದ್ಯ ಪಾಕಿಸ್ತಾನಕ್ಕಿಂತ ಉತ್ತಮವಾಗಿದ್ದೇವೆ. ಪಾಕ್ ತಂಡ ತಮ್ಮ ಗುಣಮಟ್ಟ ಹೆಚ್ಚಿಸಿಕೊಳ್ಳಲು ತಾಂತ್ರಿಕವಾಗಿ, ಕೋಚಿಂಗ್ ವಿಭಾಗ ಸೇರಿದಂತೆ ಹಲವು ವಿಭಾಗಗಳಲ್ಲಿ ನಮ್ಮ ನೆರವು ಪಡೆಯುವುದು ಒಳ್ಲೆಯದು ಎಂದಿದ್ದರು.

ವಾಘಾ ಗಡಿಯಲ್ಲಿ ತೊಡೆ ತಟ್ಟಿದ್ದ ಹಸನ್ ಅಲಿಗೆ ಚಳಿ ಬಿಡಿಸಿದ ಪಾಕ್ ಕ್ರಿಕೆಟಿಗರು..!

ಈ ಹೇಳಿಕೆಗೆ ಇದೀಗ ಪ್ರತಿಕ್ರಿಯಿಸಿರುವ ಅಖ್ತರ್, ಆಫ್ಘಾನಿಸ್ತಾನ ತಂಡದ ಮುಖ್ಯಸ್ಥ ಸ್ಟ್ಯಾಂಡಪ್ ಕಾಮಿಡಿಗಿಂತ ಚೆನ್ನಾಗಿ ಹಾಸ್ಯ ಮಾಡುತ್ತಾರೆ. ಯಾಕೆಂದರೆ, ಆಫ್ಘನ್ ಮ್ಯಾನೇಜ್’ಮೆಂಟ್ ಹೇಗಿದೆ ಎಂದು ಐಸಿಸಿ ವಿಶ್ವಕಪ್ ಅಂಕಪಟ್ಟಿ ನೋಡಿದರೆ ತಿಳಿಯುತ್ತದೆ. ಬಿಗ್ ಝೀರೋ ಎಂದು ಟ್ವೀಟ್ ಮಾಡಿದ್ದಾರೆ.

ಆಫ್ಘಾನಿಸ್ತಾನ ತಂಡವು ಇದುವರೆಗೂ ಆಡಿದ 5 ಪಂದ್ಯಗಳಲ್ಲೂ ಸೋಲು ಕಂಡಿದ್ದು, ಮೊದಲ ಗೆಲುವಿಗಾಗಿ ಹಪಹಪಿಸುತ್ತಿದೆ. ಇದೀಗ ಭಾರತ ವಿರುದ್ಧ ಕಣಕ್ಕಿಳಿದಿದೆ. ಇನ್ನು ಪಾಕಿಸ್ತಾನ ತಂಡದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಪಾಕ್ ಆಡಿದ 5 ಪಂದ್ಯಗಳಲ್ಲಿ 1 ಗೆಲುವು, ಮೂರು ಸೋಲು ಮತ್ತು ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದು, ಕೇವಲ ಮೂರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. 
ಪಾಕಿಸ್ತಾನ-ಆಫ್ಘಾನಿಸ್ತಾನ ತಂಡಗಳು ಜೂನ್ 29 ರಂದು ಮುಖಾಮುಖಿಯಾಗಲಿವೆ. ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಆಫ್ಘಾನಿಸ್ತಾನ ತಂಡವು ಮೂರು ವಿಕೆಟ್ ಗಳಿಂದ ಮಣಿಸಿತ್ತು.