Asianet Suvarna News Asianet Suvarna News

ಪಾಕ್ ವಿರುದ್ಧ ಸಚಿನ್, ಕೊಹ್ಲಿಗೂ ಆಗದ ದಾಖಲೆ ಇದೀಗ ರೋಹಿತ್ ಹೆಸರಿಗೆ..!

ವಿಶ್ವಕಪ್ ಟೂರ್ನಿಯಲ್ಲಿಂದು ರೋಹಿತ್ ಶರ್ಮಾ ಪಾಕಿಸ್ತಾನ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ. ಅಷ್ಟಕ್ಕೂ ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

World Cup 2019 Rohit Sharma Create rarest record against Pakistan
Author
Manchester, First Published Jun 16, 2019, 6:12 PM IST

ಮ್ಯಾಂಚೆಸ್ಟರ್[ಜೂ.16]: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದೆ.

ಭಾರತ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಮಾಡುವ ತೀರ್ಮಾನಕ್ಕೆ ಬಂದಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ರೋಹಿತ್ ಶರ್ಮಾ-ಕೆ.ಎಲ್ ರಾಹುಲ್ ಜೋಡಿ ಶತಕದ ಜತೆಯಾಟವಾಡುವ ಮೂಲಕ ಆಸರೆಯಾಯಿತು. ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ್ದ ರೋಹಿತ್ ಇದೀಗ ಪಾಕಿಸ್ತಾನ ವಿರುದ್ಧವೂ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಭಾರತದ ಕ್ರಿಕೆಟ್ ದಿಗ್ಗಜರೆಂದು ಗುರುತಿಸಿಕೊಂಡಿರುವ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಯೂ ಮಾಡಲಾಗದ ದಾಖಲೆ ಇದೀಗ ರೋಹಿತ್ ಪಾಲಾಗಿದೆ.

ಧೋನಿ ದಾಖಲೆ ಉಡೀಸ್ ಮಾಡಿದ ರೋಹಿತ್..!

ಏನದು ದಾಖಲೆ..?

ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್’ನಲ್ಲಿ ಸತತ ಎರಡು ಶತಕ ಸಿಡಿಸಿದ ಮೊದಲ ಹಾಗೂ ಏಕೈಕ ಬ್ಯಾಟ್ಸ್’ಮನ್ ಎನ್ನುವ ಶ್ರೇಯ ರೋಹಿತ್ ಪಾಲಾಗಿದೆ. ಈ ಮೊದಲು ರೋಹಿತ್ ಶರ್ಮಾ 2018ರ ಏಷ್ಯಾಕಪ್’ನಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 111 ರನ್ ಸಿಡಿಸಿದ್ದ ರೋಹಿತ್ ಇಂದಿನ ಪಂದ್ಯದಲ್ಲಿ 140 ರನ್ ಬಾರಿಸಿದ್ದಾರೆ. ಈ ಶತಕದೊಂದಿಗೆ ಸಚಿನ್, ಕೊಹ್ಲಿಗೂ ಮಾಡಲಾಗದ ದಾಖಲೆ ಇದೀಗ ರೋಹಿತ್ ಪಾಲಾಗಿದೆ.

ಈ ಮೊದಲು ಸಚಿನ್ ತೆಂಡುಲ್ಕರ್ 1996ರಲ್ಲಿ ಪಾಕಿಸ್ತಾನ ವಿರುದ್ಧ ಕೇವಲ 10 ದಿನಗಳ ಅಂತರದಲ್ಲಿ 2 ಶತಕ ಸಿಡಿಸಿದರಾದರೂ ಸತತ 2 ಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. 1996ರ ಏಪ್ರಿಲ್ 05ರಂದು ನಡೆದ ಸಿಂಗರ್ ಕಪ್’ನಲ್ಲಿ ಸಚಿನ್ 100 ರನ್ ಬಾರಿಸಿದ್ದರು. ಆ ಬಳಿಕ ಶಾರ್ಜಾದಲ್ಲಿ 1996ರ ಏಪ್ರಿಲ್ 12ರಲ್ಲಿ ಒಂದು ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಅದಾದ ನಂತರ ಏಪ್ರಿಲ್ 15ರಂದು ಪಾಕಿಸ್ತಾನ ವಿರುದ್ಧವೇ 118 ರನ್ ಬಾರಿಸಿದ್ದರು.

ಇನ್ನು ವಿರಾಟ್ ಕೊಹ್ಲಿ 2015ರ ವಿಶ್ವಕಪ್’ನಲ್ಲಿ ಅಡಿಲೇಡ್’ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ 107 ರನ್ ಬಾರಿಸಿದ್ದರು. ಆ ಬಳಿಕ ಬರ್ಮಿಂಗ್’ಹ್ಯಾಮ್’ನಲ್ಲಿ ಪಾಕ್ ವಿರುದ್ಧವೇ ನಡೆದ ಪಂದ್ಯದಲ್ಲಿ ಅಜೇಯ 81 ರನ್ ಬಾರಿಸಿದ್ದರು. ಇದರೊಂದಿಗೆ ಸತತ ಎರಡು ಶತಕ[ಪಾಕ್ ವಿರುದ್ದ] ಅವಕಾಶವನ್ನು ಮಿಸ್ ಮಾಡಿಕೊಂಡಿದ್ದರು. 
 

Follow Us:
Download App:
  • android
  • ios