ಲಾರ್ಡ್ಸ್(ಜೂ.23): ಭಾರತ ವಿರುದ್ದದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ, ಇದೀಗ ದಿಟ್ಟ ಹೋರಾಟ ನೀಡೋ ಮೂಲಕ ಗಮನಸೆಳೆದಿದೆ. ಸೌತ್ ಆಫ್ರಿಕಾ ವಿರುದ್ದ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ ಪಾಕಿಸ್ತಾನ 308 ರನ್ ಸಿಡಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾಗೆ 309 ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ಡೀಸೆಂಟ್ ಆರಂಭ ಪಡೆಯಿತು. ಇಮಾಮ್ ಉಲ್ ಹಕ್ ಹಾಗೂ ಫಕಾರ್ ಝಮಾನ್ 81 ರನ್ ಜೊತೆಯಾಟ ನೀಡಿದರು. ಫಕಾರ್ ಹಾಗೂ ಇಮಾಮ್ ತಲಾ 44 ರನ್ ಸಿಡಿಸಿ ಔಟಾದರು. ಆದರೆ ಬಾಬರ್ ಅಝಮ್ ಹಾಫ್ ಸೆಂಚುರಿ ಸಿಡಿಸಿ ನೆರವಾದರು. 

ಮೊಹಮ್ಮದ್ ಹಫೀಜ್ 20 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಬಾಬರ್ 69 ರನ್ ಕಾಣಿಕೆ ನೀಡಿದರು. ಬಾಬರ್ ಬಳಿಕ ಹ್ಯಾರಿಸ್ ಸೊಹೈಲ್ ಪಾಕ್ ತಂಡಕ್ಕೆ ಚೇತರಿಕೆ ನೀಡಿದರು. ಸೊಹೈಲ್ ಅರ್ಧಶತಕ ಸಿಡಿಸಿದರು. ಸೊಹೈಲ್ ಆರ್ಭಟ ಮುಂದುವರಿಸಿದರೆ, ಇತ್ತ ಇಮಾದ್ ವಾಸಿಮ್ 23 ರನ್ ಹಾಗೂ ವಹಾಬ್ ರಿಯಾಜ್ 4 ರನ್‌ಗೆ ಔಟಾದರು. ಹ್ಯಾರಿಸ್ ಸೊಹೈಲ್ 89 ರನ್ ಸಿಡಿಸಿ ನಿರ್ಗಮಿಸಿದರು. ಇದರೊಂದಿಗೆ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 308 ರನ್ ಸಿಡಿಸಿತು.