ನವದೆಹಲಿ[ಜು.06]: ಬಾಂಗ್ಲಾದೇಶ ವಿರುದ್ಧ ಗೆದ್ದರೂ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಲು ಪಾಕಿಸ್ತಾನ ವಿಫಲವಾದ ಬೆನ್ನಲ್ಲೇ ತಂಡದ ಅನುಭವಿ ಆಲ್ರೌಂಡರ್, ಭಾರತದ ಅಳಿಯ ಶೋಯೆಬ್ ಮಲಿಕ್ ಅಂತಾರಾಷ್ಟ್ರೀಯ  ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಲಾರ್ಟ್ಸ್‌ನಲ್ಲಿ 94 ರನ್ ಗಳ ಜಯಭೇರಿ ಬಾರಿಸಿದರೂ ಪಾಕಿಸ್ತಾನ ಅಂತಿಮ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯಲು ವಿಫಲವಾಗುವುದರೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತು. ಇದರ ಬೆನ್ನಲ್ಲೇ ಸಾನಿಯಾ ಮಿರ್ಜಾ ಪತಿ ಮಲಿಕ್ ಸಾಮಾಜಿಕ ಜಾಲತಾಣವಾದ ಟ್ವಿಟರ್ ಮೂಲಕ ತಮ್ಮ ವಿದಾಯದ ಸುದ್ದಿಯನ್ನು ತಿಳಿಸಿದ್ದಾರೆ.

’ಇಂದು ನಾನು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್’ನಿಂದ ನಿವೃತ್ತಿ ಪಡೆಯುತ್ತಿದ್ದೇನೆ. ನನ್ನ ಜತೆ ಆಡಿದ ಎಲ್ಲಾ ಕ್ರಿಕೆಟಿಗರಿಗೆ, ಕೋಚ್’ಗಳಿಗೆ, ಕುಟುಂಬಸ್ಥರಿಗೆ, ಸ್ನೇಹಿತರಿಗೆ, ಮಾಧ್ಯಮದವರಿಗೆ, ಅತಿ ಮುಖ್ಯವಾಗಿ ನನ್ನ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಲವ್ ಯೂ ಆಲ್‘ ಎಂದು ಟ್ವೀಟ್ ಮಾಡಿದ್ದಾರೆ.

37 ವರ್ಷದ ಮಲಿಕ್ ಮ್ಯಾಂಚೆಸ್ಟರ್’ನಲ್ಲಿ ಭಾರತ ವಿರುದ್ಧ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನಾಡಿದ್ದರು. ಆ ಪಂದ್ಯವನ್ನು ಪಾಕಿಸ್ತಾನ 89 ರನ್ ಗಳಿಂದ ಸೋತಿತ್ತು.

ಮಲಿಕ್ ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ 287 ಏಕದಿನ ಪಂದ್ಯಗಳನ್ನಾಡಿದ್ದು 34.55ರ ಸರಾಸರಿಯಲ್ಲಿ 7,534 ರನ್ ಬಾರಿಸಿದ್ದಾರೆ. ಇದರಲ್ಲಿ 9 ಶತಕ ಹಾಗೂ 44 ಅರ್ಧಶತಕಗಳು ಸೇರಿವೆ. ಇನ್ನು ಬೌಲಿಂಗ್’ನಲ್ಲಿ 158 ವಿಕೆಟ್ ಕಬಳಿಸಿದ್ದಾರೆ.

ಮಲಿಕ್ ವಿದಾಯ ಹೇಳುತ್ತಿದ್ದಂತೆ ಅವರ ಹಿರಿ-ಕಿರಿಯ ಕ್ರಿಕೆಟ್ ಆಟಗಾರರು ಶುಭಕೋರಿದ್ದಾರೆ...