ಲಾರ್ಡ್ಸ್(ಜು.14): ವಿಶ್ವಕಪ್ ಪಂದ್ಯ ರೋಚಕ ಟೈನಲ್ಲಿ ಅಂತ್ಯ, ಸೂಪರ್ ಓವರ್ ಟೈನಲ್ಲಿ ಅಂತ್ಯ. ಆದರೆ ಗರಿಷ್ಠ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ನ್ಯೂಜಿಲೆಂಡ್ ತನ್ನದಲ್ಲದ ತಪ್ಪಿಗೆ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು.  

ಅಜೇಯ 84 ರನ್ ಹಾಗೂ ಸೂಪರ್ ಓವರ್‌ನಲ್ಲೂ ಅಬ್ಬರಿಸಿ ಇಂಗ್ಲೆಂಡ್‌ಗೆ ರೋಚಕ ಗೆಲುವು ತಂದುಕೊಟ್ಟ ಬೆನ್ ಸ್ಟೋಕ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು. 2016ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಪಾಲಿಗೆ ವಿಲನ್ ಆಗಿದ್ದ ಸ್ಟೋಕ್ಸ್, 2019ರ ವಿಶ್ವಕಪ್‌ನಲ್ಲಿ ಹೀರೋ ಆಗಿ ಮಿಂಚಿದರು.

ಇಂಗ್ಲೆಂಡ್ ಚಾಂಪಿಯನ್ ಪಟ್ಟ ಗೆದ್ದುಕೊಂಡರೆ, ಈ ವಿಶ್ವಕಪ್ ಟೂರ್ನಿಯಲ್ಲಿ 578 ರನ್ ಸಿಡಿಸಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಾಲಾಗಿದೆ. ಸರಣಿ ಶ್ರೇಷ್ಠ ಪ್ರಶಸ್ತಿಗೆ ತೀವ್ರ ಪೈಪೋಟಿ ನಿರ್ಮಾಣವಾಗಿತ್ತು. ವಿಲಿಯಮ್ಸನ್ ಜೊತೆಗೆ, ಟೀಂ ಇಂಡಿಯಾದ ರೋಹಿತ್ ಶರ್ಮಾ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಬಾಂಗ್ಲಾದೇಶ ಆಲ್ರೌಂಡರ್ ಶಕೀಬ್ ಅಲ್ ಹಸನ್, ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್ ಸೇರಿದಂತೆ ಪ್ರಮುಖ ಆಟಗಾರರು ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದ್ದರು.