ಬರ್ಮಿಂಗ್ ಹ್ಯಾಮ್[ಜೂ.2]: ಶಾಹೀನ್ ಅಫ್ರೀದಿ ಮಾರಕ ದಾಳಿಯ ಹೊರತಾಗಿಯೂ ಜೇಮ್ಸ್ ನೀಶಮ್(97*) ಹಾಗೂ ಕಾಲಿನ್ ಡಿ ಗ್ರ್ಯಾಂಡ್ ಹೋಮ್(64) ಆಕರ್ಷಕ ಶತಕ(132)ದ ಜತೆಯಾಟದ ನೆರವಿನಿಂದ ನ್ಯೂಜಿಲೆಂಡ್ 237 ರನ್ ಬಾರಿಸಿದ್ದು, ಪಾಕಿಸ್ತಾನಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಜೇಮ್ಸ್ ನೀಶಮ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್ ಹೋಮ್ ಹೊರತಾಗಿ ಉಳಿದ್ಯಾವ ಬ್ಯಾಟ್ಸ್‌ಮನ್ ಗಳಿಂದ ನಿರೀಕ್ಷಿತ ಪ್ರತಿರೋಧ ಮೂಡಿಬರಲಿಲ್ಲ. ಸೆಮೀಸ್ ದೃಷ್ಟಿಯಿಂದ ಪಾಕ್ ಪಾಲಿಗೆ ಮಹತ್ವದ ಪಂದ್ಯವಾಗಿರುವುದರಿಂದ ಸರ್ಫರಾಜ್ ಅಹಮ್ಮದ್ ಪಡೆ ಆರಂಭದಿಂದಲೇ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. 

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯಲು ಮತ್ತೊಮ್ಮೆ ವಿಫಲವಾಯಿತು. ತಂಡದ ಮೊತ್ತ 24 ರನ್ ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ರಾಸ್ ಟೇಲರ್[03] ಕೂಡಾ ಅಫ್ರಿದಿ ದಾಳಿಗೆ ಪೆವಿಲಿಯನ್ ಸೇರಬೇಕಾಯಿತು. ಇದಾದ ಕೆಲ ಹೊತ್ತಿನಲ್ಲೇ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಟಾಮ್ ಲಾಥಮ್ ಕೂಡಾ[01] ಒಂದಕ್ಕಿ ಮೊತ್ತಕ್ಕೆ ಪೆವಿಲಿಯನ್ ಸೇರಿದಾಗ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 46 ರನ್ ಬಾರಿಸಿತ್ತು. 5ನೇ ವಿಕೆಟ್’ಗೆ ಕೇನ್ ವಿಲಿಯಮ್ಸನ್ ಹಾಗೂ ಜೇಮ್ಸ್ ನೀಶಮ್ ಜೋಡಿ 37 ರನ್ ಗಳ ಜತೆಯಾಟ ನಿಭಾಯಿಸಿತು. ಉತ್ತಮವಾಗಿ ಆಡುತ್ತಿದ್ದ ನಾಯಕ ಕೇನ್ ವಿಲಿಯಮ್ಸನ್ 41 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ಮಿಂಚಿದ ನೀಶಮ್-ಗ್ರ್ಯಾಂಡ್ ಹೋಮ್: ಒಂದು ಹಂತದಲ್ಲಿ 83 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಿವೀಸ್ ತಂಡಕ್ಕೆ ಜೇಮ್ಸ್ ನೀಶಮ್ ಹಾಗೂ ಕಾಲಿನ್ ಡಿ ಗ್ರಾಂಡ್’ಹೋಮ್ ಜೋಡಿ ಆಸರೆಯಾದರು. ಆರಂಭದಲ್ಲಿ ಪಾಕಿಸ್ತಾನ ಬೌಲರ್ ಗಳನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ ಆ ಬಳಿಕ ಲೀಲಾಜಾಲವಾಗಿ ರನ್ ಕಲೆಹಾಕತೊಡಗಿದರು. ಆರನೇ ವಿಕೆಟ್ ಗೆ ಈ ಜೋಡಿ 132 ರನ್ ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೌರವಾನ್ವಿತ ಮೊತ್ತದತ್ತ ಕೊಂಡ್ಯೊಯ್ದರು. ಗ್ರ್ಯಾಂಡ್ ಹೋಮ್ 71 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 64 ರನ್ ಬಾರಿಸಿ ರನೌಟ್ ಆದರೆ, ಜೇಮ್ಸ್ ನೀಶಮ್112 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ರನ್ ಬಾರಿಸಿ ಅಜೇಯರಾಗುಳಿದರು.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 237/6

ಜೇಮ್ಸ್ ನೀಶಮ್: 97*

ಶಾಹೀನ್ ಅಫ್ರೀದಿ: 28/3

[*ನ್ಯೂಜಿಲೆಂಡ್ ಬ್ಯಾಟಿಂಗ್ ಮುಕ್ತಾಯದ ವೇಳೆಗೆ ]