ಲಂಡನ್[ಮೇ.31]: ನೀರಸ ಪ್ರದರ್ಶನದ ಮೂಲಕ ಕಂಗೆಟ್ಟಿರುವ ಪಾಕಿಸ್ತಾನ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ನಾಯಕ ಸರ್ಫರಾಜ್ ಅಹಮ್ಮದ್ ಪರಿಸ್ಥಿತಿ. ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಬಕಿ‌ಂಗ್‌ಹ್ಯಾಮ್ ಅರಮನೆಯಲ್ಲಿ ಬ್ರಿಟನ್ ರಾಣಿ ಭೇಟಿಯಾಗುವ ಸಂದರ್ಭದಲ್ಲಿ ಸರ್ಫರಾಜ್ ಅಹಮ್ಮದ್ ತೊಟ್ಟ ಧಿರಿಸನ್ನು ಪಾಕಿಸ್ತಾನ ಮೂಲದ ಕೆನಡಿಯನ್ ಪತ್ರಕರ್ತ ಟೀಕಿಸಿದ್ದರು. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನ ಕ್ರಿಕೆಟ್ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ.

ಅಷ್ಟಕ್ಕೂ ಆಗಿದ್ದೇನು..?

ವಿಶ್ವಕಪ್ ಟೂರ್ನಿ ಆರಂಭದ ಮುನ್ನ ದಿನ 10 ತಂಡದ ನಾಯಕರು ಬಕಿ‌ಂಗ್‌ಹ್ಯಾಮ್ ಅರಮನೆಯಲ್ಲಿ ಇಂಗ್ಲೆಂಡ್ ರಾಣಿ ಎಲೆಜಬೆತ್ 2 ರನ್ನು ಭೇಟಿಯಾಗಿದ್ದರು. ಈ ವೇಳೆ ಉಳಿದೆಲ್ಲಾ ತಂಡದ ನಾಯಕರು ಬ್ಲೇಜರ್ ಹಾಗೂ ಟೈ ಧರಿಸಿ ಬಂದಿದ್ದರೆ, ಪಾಕಿಸ್ತಾನದ ನಾಯಕ ಸರ್ಫರಾಜ್ ಅಹಮ್ಮದ್ ಸಲ್ವರ್ ಕಮೀಜ್ ರೀತಿಯ ಡ್ರೆಸ್ ಹಾಕಿಕೊಂಡು ಬಂದಿದ್ದರು. ಇದನ್ನು ಗಮನಿಸಿದ ಪಾಕಿಸ್ತಾನ ಮೂಲದ ಕೆನಡಿಯನ್ ಪತ್ರಕರ್ತ ತಾರೀಕ್ ಫತ್ ಪಾಕ್ ನಾಯಕನನ್ನು ಟ್ವಿಟರ್‌ನಲ್ಲಿ ಟೀಕಿಸಿದ್ದರು. 

ಈ ಟ್ವೀಟ್‌ನಿಂದ ಕೆರಳಿದ ಭಾರತೀಯ ಅಭಿಮಾನಿಗಳು ಸರ್ಫರಾಜ್ ಅಹಮ್ಮದ್ ಬೆಂಬಲಕ್ಕೆ ನಿಲ್ಲುವ ಮೂಲಕ ಕೆನಡಿಯನ್ನು ಪತ್ರಕರ್ತನ ಚಳಿಜ್ವರ ಬಿಡಿಸಿದ್ದಾರೆ. ಶಶಾಂಕೋ ಆಧಿತ್ಯ ಎನ್ನುವವರು ಭಾರತೀಯನಾಗಿ ಸರ್ಫರಾಜ್ ಡ್ರೆಸ್‌ನಲ್ಲಿ ಯಾವುದೇ ತಪ್ಪು ಎನಿಸುತ್ತಿಲ್ಲ ಎಂದಿದ್ದರೆ, ಅರ್ಪಿತ್ ಗುಪ್ತ್ ಎನ್ನುವವರು ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಜಗತ್ತಿನೆಲ್ಲಡೆ ಪ್ರದರ್ಶಿಸಬೇಕು. ನಮ್ಮ ಸಂಸ್ಕೃತಿ, ಉಡುಗೆ-ತೊಡುಗೆ ಹಾಗೂ ಇತಿಹಾಸವೇ ನಾವ್ಯಾರೆಂದು ತಿಳಿಸುತ್ತದೆ. ಈ ಇಂಗ್ಲೀಷರು ನಮ್ಮನ್ನೇ ಲೂಟಿ ಮಾಡಿ, ಈಗ ನಮಗೇ ಡ್ರೆಸ್ ಮಾಡೋದು ಹೇಗೆ ಎಂದು ಹೇಳಿಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದ ಪಾಕ್ ನಾಯಕ ಸರ್ಫರಾಜ್ ಅಹಮ್ಮದ್, ಸಲ್ವಾರ್ ಕಮೀಜ್ ನಮ್ಮ ರಾಷ್ಟ್ರೀಯ ಉಡುಪಾಗಿದೆ. ಪಾಕ್ ಕ್ರಿಕೆಟ್ ಮಂಡಳಿಯ ಸೂಚನೆಯಂತೆ ನಮ್ಮ ರಾಷ್ಟ್ರೀಯ ಉಡುಪನ್ನು ಉತ್ತೇಜಿಸಲು ನಾನು ಈ ಡ್ರೆಸ್ ಧರಿಸಿದೆ. ನನ್ನ ಉಡುಪಿನ ಬಗ್ಗೆ ಹೆಮ್ಮೆಯಿದೆ ಎಂದು ಸರ್ಫರಾಜ್ ಹೇಳಿದ್ದರು.

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...