ಮ್ಯಾಂಚೆಸ್ಟರ್[ಜೂ.18]: ನಾಯಕ ಇಯಾನ್ ಮಾರ್ಗನ್[148] ಸಿಡಿಲಬ್ಬರದ ಶತಕ ಹಾಗೂ ಜಾನಿ ಬೇರ್’ಸ್ಟೋ ಮತ್ತು ಜೋ ರೂಟ್ ಶತಕವಂಚಿತ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ನಿಗದಿತ 50 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 397 ರನ್ ಬಾರಿಸಿದ್ದು, ಆಫ್ಘನ್ ತಂಡಕ್ಕೆ ಕಠಿಣ ಗುರಿ ನೀಡಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಉತ್ತಮ ಆರಂಭವನ್ನೇ ಪಡೆಯಿತು. ಜೇಸನ್ ರಾಯ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಜೇಮ್ಸ್ ವಿನ್ಸ್ ಜತೆ ಇನಿಂಗ್ಸ್ ಆರಂಭಿಸಿದ ಬೇರ್’ಸ್ಟೋ ಮೊದಲ ವಿಕೆಟ್’ಗೆ 44 ರನ್’ಗಳ ಜತೆಯಾಟವಾಡಿದರು. ವಿನ್ಸ್ 26 ರನ್ ಬಾರಿಸಿ ಜದ್ರಾನ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ನಡೆದದ್ದು ಅಕ್ಷರಶಃ ರನ್ ಹೊಳೆ.

ಬೇರ್’ಸ್ಟೋ-ರೂಟ್ ಶತಕದ ಜತೆಯಾಟ: ಮೊದಲ ವಿಕೆಟ್ ಪತನದ ಬಳಿಕ ಜತೆಯಾದ ರೂಟ್, ಆರಂಭಿಕ ಬ್ಯಾಟ್ಸ್’ಮನ್ ಬೇರ್’ಸ್ಟೋ ಉತ್ತಮ ಜತೆಯಾಟ ನಿಭಾಯಿಸಿದರು. ಆಫ್ಘನ್ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಎರಡನೇ ವಿಕೆಟ್’ಗೆ 120 ರನ್’ಗಳ ಜತೆಯಾಟವಾಡಿದರು. ಶತಕದ ಹೊಸ್ತಿಲಲ್ಲಿದ್ದ ಬೇರ್’ಸ್ಟೋ 90 ರನ್ ಬಾರಿಸಿ ನಾಯಕ ನೈಬ್ ಬೌಲಿಂಗ್’ನಲ್ಲಿ ಅವರಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ವಿಶ್ವದಾಖಲೆ ಬರೆದ ಮಾರ್ಗನ್: ಬೇರ್’ಸ್ಟೋ ವಿಕೆಟ್ ಪತನದ ಬಳಿಕ ಕ್ರೀಸ್’ಗಿಳಿದ ಇಂಗ್ಲಂಡ್ ನಾಯಕ ಇಯಾನ್ ಮಾರ್ಗನ್ ಆಫ್ಘನ್ ಬೌಲರ್’ಗಳನ್ನು ಮನಸೋ ಇಚ್ಛೆ ದಂಡಿಸಿದರು. ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿದ ಮಾರ್ಗನ್ ವಿಶ್ವಕಪ್ ಟೂರ್ನಿಯಲ್ಲಿ 4ನೇ ಅತಿವೇಗದ ಶತಕ ಸಿಡಿಸಿ ಮಿಂಚಿದರು. ಮಾರ್ಗನ್ ಕೇವಲ 71 ಎಸೆತಗಳಲ್ಲಿ 4 ಬೌಂಡರಿ ಹಾಗೂ 17 ಮನಮೋಹಕ ಸಿಕ್ಸರ್’ಗಳ ನೆರವಿನಿಂದ 148 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಆಫ್ಘನ್ ಎದುರು ಸಿಕ್ಸರ್ ಮಳೆ ಹರಿಸಿದ ಮಾರ್ಗನ್ ಬರೋಬ್ಬರಿ 17 ಸಿಕ್ಸರ್ ಸಿಡಿಸುವ ಮೂಲಕ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ವಿಶ್ವದಾಖಲೆ ತಮ್ಮದಾಗಿಸಿಕೊಂಡರು. ಈ ಮೊದಲು ರೋಹಿತ್ ಶರ್ಮಾ[16] ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಮಾಡಿದ್ದರು. ಒಂದು ಕಡೆ ಮಾರ್ಗನ್ ಅಬ್ಬರಿಸುತ್ತಿದ್ದರೆ, ಮತ್ತೊಂದೆಡೆ ಎಚ್ಚರಿಕೆಯ ಆಟವಾಡಿದ ರೂಟ್ 88 ರನ್ ಬಾರಿಸಿ ನೈಬ್’ಗೆ ಎರಡನೇ ಬಲಿಯಾದರು. ರೂಟ್ ವಿಕೆಟ್ ಒಪ್ಪಿಸುವ ಮುನ್ನ ಮೂರನೇ ವಿಕೆಟ್‌ಗೆ ಈ ಜೋಡಿ 189 ರನ್‌ಗಳ ಜತೆಯಾಟವಾಡಿತು. 

ಕೊನೆಯಲ್ಲಿ ಮಿಂಚಿನ ಪ್ರದರ್ಶನ ತೋರಿದ ಮೊಯಿನ್ ಅಲಿ ಕೇವಲ 9 ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸರ್ ನೆರವಿನಿಂದ 31 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 400ರ ಸಮೀಪ ಕೊಂಡ್ಯೊಯ್ದರು. ಆಫ್ಘನ್ ಪರ ನಾಯಕ ಗುಲ್ಬದ್ದೀನ್ ನೈಬ್ ಹಾಗೂ ಜದ್ರಾನ್ ತಲಾ 3 ವಿಕೆಟ್ ಕಬಳಿಸಿದರೆ, ಆಫ್ಘನ್ ಪ್ರತಿಭಾನ್ವಿತ ಸ್ಪಿನ್ನರ್ ರಶೀದ್ ಖಾನ್ ಕೇವಲ 9 ಓವರ್‌ಗಳಲ್ಲಿ 110 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದರು. 

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್: 397/6

ಇಯಾನ್ ಮಾರ್ಗನ್: 148

ಗುಲ್ಬದ್ದೀನ್ ನೈಬ್: 68/3