ಬರ್ಮಿಂಗ್‌ಹ್ಯಾಮ್(ಜೂ. 30): ಟೀಂ ಇಂಡಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಇಂಗ್ಲೆಂಡ್ ಬೃಹತ್ ಮೊತ್ತ ಪೇರಿಸಿದೆ. ಜಾನಿ ಬೈರ್‌ಸ್ಟೋ ಭರ್ಜರಿ ಶತಕ, ಜೇಸನ್ ರಾಯ್ ಹಾಗೂ ಬೆನ್ ಸ್ಚೋಕ್ಸ್ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 337 ರನ್ ಸಿಡಿಸಿದೆ. ಇದೀಗ ಕೊಹ್ಲಿ ಸೈನ್ಯ ಗೆಲುವಿಗೆ 338 ರನ್ ಸಿಡಿಸಬೇಕಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡಕ್ಕೆ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋ ದಾಖಲೆಯ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 160 ರನ್ ಜೊತೆಯಾಟ ನೀಡಿದರು. ರಾಯ್ ಹಾಫ್ ಸೆಂಚುರಿ ಸಿಡಿಸಿ ಔಟಾದರು. ರವೀಂದ್ರ ಜಡೇಜಾ ಹಿಡಿದ ಅದ್ಭುತ ಕ್ಯಾಚ್‌ನಿಂದ ಆರಂಭಿಕರ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ರಾಯ್ 66 ರನ್ ಕಾಣಿಕೆ ನೀಡಿದರು. ಇತ್ತ ಬೈರ್‌ಸ್ಟೋ ಅಬ್ಬರಿಸಿದರು.

ಬೈರ್‌ಸ್ಚೋ ಆಕರ್ಷಕ ಶತಕ ಸಿಡಿಸಿದರು. ಜಾನಿ ಬೈರ್‌ಸ್ಟೋ 111 ರನ್ ಸಿಡಿಸಿ ಔಟಾದರು. ನಾಯಕ ಇಯಾನ್ ಮಾರ್ಗನ್ ಕೇವಲ 1 ರನ್ ಸಿಡಿಸಿ ಔಟಾದರು. ಜೂ ರೂಟ್ 44 ರನ್ ಕಾಣಿಕೆ ನೀಡಿದರೆ. ಕ್ರಿಸ್ ವೋಕ್ಸ್ ಅಬ್ಬರಿಸಲಿಲ್ಲ. ಆದರೆ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ಸ್ಟೋಕ್ಸ್ 54 ಎಸೆತದಲ್ಲಿ 79 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್  7 ವಿಕೆಟ್ ನಷ್ಟಕ್ಕೆ 337 ರನ್ ಸಿಡಿಸಿತು. ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್ ಕಬಳಿಸಿ ಮಿಂಚಿದರು.