ಸೌಥಾಂಪ್ಟನ್(ಜೂ.14): ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಟೂರ್ನಿ ಲೀಗ್ ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿದ ಇಂಗ್ಲೆಂಡ್ 8 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇತ್ತ ವೆಸ್ಟ್ ಇಂಡೀಸ್ ಟೂರ್ನಿಯಲ್ಲಿ 2ನೇ ಸೋಲು ಅನುಭವಿಸಿದೆ.

ಗೆಲುವಿಗೆ 213 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ಯಾವ ಹಂತದಲ್ಲೂ ಆತಂಕ ಎದುರಿಸಲಿಲ್ಲ. ಆರಂಭಿಕರಾದ ಜಾನಿ ಬೈರಿಸ್ಟೋ ಹಾಗೂ ಜೂ ರೂಟ್ ಮೊದಲ ವಿಕೆಟ್‌ಗೆ 95 ರನ್ ಜೊತೆಯಾಟ ನೀಡಿದರು. ಬೈರ್‌ಸ್ಟೋ 45 ರನ್ ಸಿಡಿಸಿ ಔಟಾದರು. ಬಳಿಕ ಜೂ ರೂಟ್ ಹಾಗೂ ಕ್ರಿಸ್ ವೋಕ್ಸ್ ಜೊತೆಯಾಟ ಇಂಗ್ಲೆಂಡ್ ಗೆಲುವಿನ ಹಾದಿ ಸುಗಮಗೊಳಿಸಿತು.

ಕ್ರಿಸ್ ವೋಕ್ಸ್ 40 ರನ್ ಸಿಡಿಸಿ ಔಟಾದರು. ಆದರೆ ಅಬ್ಬರಿಸಿದ  ಜೋ ರೂಟ್ ಆಕರ್ಷಕ ಶತಕ ಸಿಡಿಸಿದರು. ಈ ಮೂಲಕ 2019ರ ವಿಶ್ವಕಪ್ ಟೂರ್ನಿಯಲ್ಲಿ 2 ಸೆಂಚುರಿ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. ರೂಟ್ ಅಜೇಯ 100 ರನ್ ಸಿಡಿಸಿದರೆ ಬೆನ್ ಸ್ಟೋಕ್ಸ್ ಅಜೇಯ 10 ರನ್ ಸಿಡಿಸಿದರು.  ಈ ಮೂಲಕ ಇಂಗ್ಲೆಂಡ್ 33.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 8 ವಿಕೆಟ್ ಗೆಲುವು ಸಾಧಿಸಿದ ಇಂಗ್ಲೆಂಡ್ ಆಡಿದ 4 ಪಂದ್ಯದಲ್ಲಿ 3 ಗೆಲುವು ಹಾಗೂ 1 ಸೋಲು ಅನುಭವಿಸಿದೆ.