ಬರ್ಮಿಂಗ್‌ಹ್ಯಾಮ್(ಜೂ.30): ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನಗ್ಗುತ್ತಿದ್ದ ಟೀಂ ಇಂಡಿಯಾಗೆ ಮೊದಲ ಆಘಾತ ಎದುರಾಗಿದೆ. ಇಂಗ್ಲೆಂಡ್ ವಿರುದ್ಧ ನಡೆದ 38ನೇ ಲೀಗ್ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. 31 ರನ್ ಗೆಲುವು ಸಾಧಿಸಿದ ಇಂಗ್ಲೆಂಡ್ ಸೆಮಿಫೈನಲ್ ಹಾದಿ ಕೊಂಚ ಸುಗಮಗೊಂಡಿದೆ. ಆದರೆ ಭಾರತದ ಗೆಲುವಿಗಾಗಿ ಪ್ರಾರ್ಥಿಸಿದ್ದ ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದೆ. 

ಗೆಲುವಿಗೆ 338 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಆರಂಭದಲ್ಲೇ ಕೆ.ಎಲ್ ರಾಹುಲ್ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ರಾಹುಲ್ ಡಕೌಟ್ ಆದರು. ಆದರೆ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟ ಟೀಂ ಇಂಡಿಯಾ ಅಭಿಮಾನಿಗಳಿಗೆ ಸಮಾಧಾನ ತಂದಿತು. ಕೊಹ್ಲಿ ಸತತ 5ನೇ ಹಾಫ್ ಸೆಂಚುರಿ ಸಿಡಿಸಿದರು.

ವಿರಾಟ್ ಕೊಹ್ಲಿ 66 ರನ್ ಸಿಡಿಸಿ ಔಟಾದರು. ಇತ್ತ ರೋಹಿತ್ ಶರ್ಮಾ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ 3ನೇ ಸೆಂಚುರಿ ದಾಖಲಿಸಿದರು. ಸೆಂಚುರಿ ಸಿಡಿಸಿದ ಬೆನ್ನಲ್ಲೇ ರೋಹಿತ್ ವಿಕೆಟ್ ಪತನಗೊಂಡಿತು. ರೋಹಿತ್ 102 ರನ್ ಸಿಡಿಸಿದರು. ರಿಷಬ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಸ್ಫೋಟಕ ಇನ್ನಿಂಗ್ಸ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು.

ಪಂತ್  ಆಟ 32 ರನ್‌ಗೆ ಅಂತ್ಯವಾಯಿತು. ಹಾರ್ದಿಕ್ ಪಾಂಡ್ಯ 33 ಎಸೆತದಲ್ಲಿ 45 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಟೀಂ ಇಂಡಿಯಾ ಗೆಲುವಿನ ಹಾದಿ ಕಠಿಣವಾಯಿತು. ಧೋನಿ ಹಾಗೂ ಕೇದಾರ್ ಜಾಧವ್ ಹೋರಾಟ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಅಂತಿಮ 12 ಎಸೆತದಲ್ಲಿ ಭಾರತಕ್ಕೆ 51 ರನ್ ಬೇಕಿತ್ತು. ಧೋನಿ 42 ಅಜೇಯ ರನ್ ಹಾಗೂ ಜಾಧವ್ ಅಜೇಯ 12 ರನ್ ಸಿಡಿಸಿದರೂ ಗೆಲುವು  ಸಾಧಿಸಲಿಲ್ಲ.

ಭಾರತ  5 ವಿಕೆಟ್ ನಷ್ಟಕ್ಕೆ 306 ರನ್ ಸಿಡಿಸಿತು. ಇದರೊಂದಿಗೆ ಇಂಗ್ಲೆಂಡ್ 31 ರನ್ ಗೆಲುವು ಸಾಧಿಸಿತು. ಅಂಕಪಟ್ಟಿಯಲ್ಲಿ 10 ಸಂಪಾದಿಸಿದ ಇಂಗ್ಲೆಂಡ್, ಪಾಕಿಸ್ತಾನ ತಂಡ ಹಿಂದಿಕ್ಕಿ  ನಾಲ್ಕನೇ ಸ್ಥಾನಕ್ಕೇರಿತು. ಭಾರತದ ಸೋಲು, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ಸೆಮಿಫೈನಲ್ ಪ್ರವೇಶದ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.