ಮ್ಯಾಂಚೆಸ್ಟರ್(ಜೂ.18): ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಆತಿಥೇಯ ಇಂಗ್ಲೆಂಡ್ ತಂಡ 150 ರನ್'ಗಳಿಂದ ಆಫ್ಘಾನಿಸ್ತಾನವನ್ನು ಮಣಿಸಿದೆ. ಇದರೊಂದಿಗೆ ಆತಿಥೇಯ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಸತತ ಐದು ಸೋಲು ಕಂಡ ಆಫ್ಘಾನಿಸ್ತಾನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.

ಇಂಗ್ಲೆಂಡ್ ನೀಡಿದ್ದ 398 ರನ್ ಗಳ ಗುರಿ ಬೆನ್ನತ್ತಿದ ಆಪ್ಘಾನಿಸ್ತಾನಕ್ಕೆ ಜೋಫ್ರಾ ಆರ್ಚರ್ ತಾವೆಸೆದ ಮೊದಲ ಓವರ್'ನಲ್ಲೇ ಆಘಾತ ನೀಡಿದರು. ನೂರ್ ಅಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಆ ಬಳಿಕ ಎರಡನೇ ವಿಕೆಟ್ ಗೆ ನಾಯಕ ಗುಲ್ಬದ್ದೀನ್ ನೈಬ್ ಹಾಗೂ ರೆಹಮತ್ ಶಾ ಜೋಡಿ 48 ರನ್ ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಸಂಕಷ್ಟದಿಂದ ಮೇಲೆತ್ತುವ ಪ್ರಯತ್ನ ಮಾಡಿದರು. ನಾಯಕ ನೈಬ್ ಸ್ಫೋಟಕ ಬ್ಯಾಟಿಂಗ್ ಮಾಡುವ ಯತ್ನದಲ್ಲಿ ಮಾರ್ಕ್ ವುಡ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ರೆಹಮತ್ ಶಾ 46 ರನ್ ಬಾರಿಸಿ ಆದಿಲ್ ರಶೀದ್'ಗೆ ವಿಕೆಟ್ ಒಪ್ಪಿಸಿದರು.

ಹಸ್ಮತುಲ್ಲಾ ಶಾಹಿದಿ ನೆಲಕಚ್ಚಿ ಆಡುವ ಮೂಲಕ ಇಂಗ್ಲೆಂಡ್ ಬೌಲರ್ ಗಳನ್ನು ಕಾಡಿದರು. ನಾಲ್ಕನೇ ವಿಕೆಟ್ ಗೆ ಮಾಜಿ ನಾಯಕ ಆಸ್ಗರ್ ಆಫ್ಘನ್ ಜತೆ ಹಸ್ಮತುಲ್ಲಾ ಶಾಹಿದಿ 94 ರನ್ ಗಳ ಜತೆಯಾಟ ನಿಭಾಯಿಸಿದರು. ಆಸ್ಗರ್ 48 ಎಸೆತಗಳಲ್ಲಿ 3 ಬೌಂಡರಿ ಹಾಗೂ ಸಿಕ್ಸರ್ ಸಹಿತ 44 ರನ್ ಬಾರಿಸಿ ರಶೀದ್ ಗೆ ಎರಡನೇ ಬಲಿಯಾದರೆ, ಶಾಹಿದಿ ನೂರು ಎಸೆತಗಳನ್ನು ಎದುರಿಸಿ 5 ಬೌಂಡರಿ ಮತ್ತು ಎರಡು ಸಿಕ್ಸರ್ ಸಹಿತ 76 ರನ್ ಬಾರಿಸಿ ಆರ್ಚರ್ ಗೆ ಎರಡನೇ ಬಲಿಯಾದರು. ಬಾಲಂಗೋಚಿಗಳಾದ ನಜೀಬುಲ್ಲಾ(15), ನಬೀ(9),ರಶೀದ್ ಖಾನ್(8) ಬ್ಯಾಟಿಂಗ್ ತಂಡದ ಸೋಲಿನ ಅಂತರ ಕಡಿಮೆ ಮಾಡಲಷ್ಟೇ ಶಕ್ತವಾಯಿತು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್(148), ಜಾನಿ ಬೇರ್'ಸ್ಟೋ(90) ಹಾಗೂ ಜೋ ರೂಟ್(88) ಆಕರ್ಷಕ ಬ್ಯಾಟಿಂಗ್ ನೆರವಿನಿಂದ 397 ರನ್ ಬಾರಿಸಿತ್ತು. ಬರೋಬ್ಬರಿ 17 ಸಿಕ್ಸರ್ ಸಿಡಿಸಿದ ನಾಯಕ ಮಾರ್ಗನ್ ವಿಶ್ವದಾಖಲೆ ಬರೆದರು.