ಲಂಡನ್‌(ಜೂ.10): ಭ್ರಷ್ಟಾಚಾರ ಮುಕ್ತ ವಿಶ್ವಕಪ್‌ ನಡೆಸುವ ಉದ್ದೇಶದಿಂದ ಟೂರ್ನಿಗೆ ಆತಿಥ್ಯ ವಹಿಸಿರುವ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಎಲ್ಲಾ ತಂಡಗಳ ಆಟಗಾರರು, ಸಿಬ್ಬಂದಿ, ಅಂಪೈರ್‌ಗಳು, ಮ್ಯಾಚ್‌ ರೆಫ್ರಿಗಳಿಗೆ ವಿಶೇಷ ಡೆಬಿಟ್‌ ಕಾರ್ಡ್‌ ವಿತರಿಸಿದ್ದು, ಆದಷ್ಟು ನಗದು ವ್ಯವಹಾರವನ್ನು ಮಾಡದಂತೆ ಸೂಚಿಸಿದೆ. ಇಸಿಬಿ ಆಟಗಾರರು, ಅಂಪೈರ್‌, ರೆಫ್ರಿಗಳಿಗೆ ದಿನ ಭತ್ಯೆ ನೀಡಲಿದೆ. 

ಈ ಮೊದಲು ಆತಿಥೇಯ ಕ್ರಿಕೆಟ್‌ ಮಂಡಳಿ ಪ್ರತಿ ತಂಡದ ವ್ಯವಸ್ಥಾಪಕರಿಗೆ ದಿನ ಭತ್ಯೆ ಮೊತ್ತವನ್ನು ಹಸ್ತಾಂತರಿಸುತ್ತಿತ್ತು. ವ್ಯವಸ್ಥಾಪಕರು ಆಟಗಾರರಿಗೆ, ಸಿಬ್ಬಂದಿಗೆ ಹಂಚುತ್ತಿದ್ದರು. ಆದರೆ ಈ ಬಾರಿ ಖಾತೆಗೆ ಜಮೆ ಮಾಡಲಿದ್ದು, ಶಾಪಿಂಗ್‌, ಹೋಟೆಲ್‌ ಬಿಲ್‌ ಸೇರಿದಂತೆ ಇನ್ನಿತರ ವಹಿವಾಟಿಗೆ ಡೆಬಿಟ್‌ ಕಾರ್ಡ್‌ ಬಳಕೆ ಮಾಡಬೇಕಿದೆ. ಇದರಿಂದ ಟೂರ್ನಿ ವೇಳೆ ಆಗುವ ಹಣಕಾಸಿನ ವ್ಯವಹಾರದ ದಾಖಲೆ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳಿಗೆ ಲಭ್ಯವಾಗಲಿದೆ.

ಪಾಕಿಸ್ತಾನ ಕ್ರಿಕೆಟ್ ತಂಡ 2010ರಲ್ಲಿ ಭ್ರಷ್ಟಾಚಾರ ವಿಚಾರವಾಗಿ ಸಾಕಷ್ಟು ಸಂಕಷ್ಟ ಎದುರಿಸಿತ್ತು. ಇಂಗ್ಲೆಂಡ್ ನಲ್ಲೇ ಟೆಸ್ಟ್ ಸರಣಿ ವೇಳೆ ಪಾಕಿಸ್ತಾನದ ಕ್ರಿಕೆಟಿಗರಾದ ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಅಮೀರ್ ಸ್ಪಾಟ್ ಫಿಕ್ಸಿಂಗ್ ನಡೆಸಿ ನಿಷೇಧಕ್ಕೆ ಗುರಿಯಾಗಿದ್ದರು.