ಬರ್ಮಿಂಗ್‌ಹ್ಯಾಮ್[ಜೂ.19]: 2015ರ ಏಕದಿನ ವಿಶ್ವಕಪ್ ಸೆಮಿಫೈನಲ್. ದಕ್ಷಿಣ ಆಫ್ರಿಕಾವನ್ನು ಸೋಲಿಸಿ ನ್ಯೂಜಿಲೆಂಡ್ ಫೈನಲ್ ಪ್ರವೇಶಿಸಿತು. ಎಬಿ ಡಿ ವಿಲಿಯರ್ಸ್‌ ಸೇರಿದಂತೆ ದ.ಆಫ್ರಿಕಾ ತಂಡದ ಎಲ್ಲಾ ಆಟಗಾರರು ಕಣ್ಣೀರಿಡುತ್ತಾ ಮೈದಾನದಿಂದ ಹೊರನಡೆದರು. ಗೆಲುವಿನ ರನ್ ಸಿಡಿಸಿದ ನ್ಯೂಜಿಲೆಂಡ್‌ನ ಗ್ರ್ಯಾಂಟ್ ಎಲಿಯಟ್, ದುಃಖದಲ್ಲಿದ್ದದ.ಆಫ್ರಿಕಾ ವೇಗಿ ಸ್ಟೇನ್ ಕೈಹಿಡಿದು ಮೇಲಕ್ಕೆತ್ತಿದ ಚಿತ್ರ ವೈರಲ್ ಆಗಿತ್ತು. ಆ ವಿಶ್ವಕಪ್‌ನ ಅತ್ಯಂತ ಪ್ರಭಾವಿ ಫೋಟೋಗಳಲ್ಲಿ ಅದೂ ಒಂದು. ಆ ಸೋಲಿನ ಸೇಡಿಗಾಗಿ ದ.ಆಫ್ರಿಕಾ ಕಾತರಿಸುತ್ತಿದ್ದು, ಬುಧವಾರ ಇಲ್ಲಿ ನಡೆಯಲಿರುವ 2019ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ಈ ವಿಶ್ವಕಪ್‌ನಲ್ಲಿ ಸತತ 3 ಸೋಲು ಅನುಭವಿಸಿದ ಬಳಿಕ ಮಳೆಯಿಂದ ಪಂದ್ಯ ರದ್ದಾದ ಕಾರಣ, ದಕ್ಷಿಣ ಆಫ್ರಿಕಾದ ಮೊದಲು ಗೆಲುವು ವಿಳಂಬಗೊಂಡಿತು. ಆಫ್ಘಾನಿಸ್ತಾನವನ್ನು ಸೋಲಿಸಿ ಜಯದ ಸಿಹಿ ಸವಿದಿದ್ದ ಹರಿಣ ಪಡೆ, ಕಿವೀಸ್ ವಿರುದ್ಧ ಸಾಂಘಿಕ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ವೇಗಿ ಲುಂಗಿ ಎನ್‌ಗಿಡಿ ಫಿಟ್ ಆಗಿದ್ದು, ಈ ಪಂದ್ಯದಲ್ಲಿ ಆಡಲಿದ್ದಾರೆ. ದ.ಆಫ್ರಿಕಾ ಬೌಲಿಂಗ್ ಪಡೆಗೆ ಎನ್‌ಗಿಡಿ ಬಲ ತುಂಬಲಿದ್ದಾರೆ. ಆರಂಭಿಕ ಆಟಗಾರರಾದ ಹಾಶೀಂ ಆಮ್ಲಾ, ಕ್ವಿಂಟನ್ ಡಿ ಕಾಕ್ ಲಯಕ್ಕೆ ಮರಳಿರುವುದು ಆಫ್ರಿಕಾದ ಆತ್ಮವಿಶ್ವಾಸ ಹೆಚ್ಚಿಸಿದೆ. ನಾಯಕ ಫಾಫ್ ಡು ಪ್ಲೆಸಿ ಹಾಗೂ ಮಧ್ಯಮ ಕ್ರಮಾಂಕದಿಂದ ಜವಾಬ್ದಾರಿಯುತ ಆಟವನ್ನು ತಂಡ ನಿರೀಕ್ಷೆ ಮಾಡುತ್ತಿದೆ.

ಮತ್ತೊಂದೆಡೆ ನ್ಯೂಜಿಲೆಂಡ್ ಸಮತೋಲನದಿಂದ ಕೂಡಿದೆ. ನಾಯಕ ಕೇನ್ ವಿಲಿಯಮ್ಸನ್, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ರಾಸ್ ಟೇಲರ್ ಸಹ
ಲಯ ಕಾಯ್ದುಕೊಂಡಿದ್ದಾರೆ. ಆರಂಭಿಕರಾದ ಕಾಲಿನ್ ಮನ್ರೊ ಹಾಗೂ ಮಾರ್ಟಿನ್ ಗಪ್ಟಿಲ್ ಸ್ಫೋಟಕ ಆಟವಾಡಿದರೆ ದ.ಆಫ್ರಿಕಾಕ್ಕೆ ಸಂಕಷ್ಟ ಎದುರಾಗಲಿದೆ. ಬೌಲ್ಟ್, ಫರ್ಗ್ಯೂಸನ್ ಅತ್ಯುತ್ತಮ ಲಯದಲ್ಲಿದ್ದಾರೆ. ಜತೆಗೆ ಇಬ್ಬರು ಪರಿಣಾಮಕಾರಿ ಆಲ್ರೌಂಡರ್‌ಗಳಾದ ನೀಶಮ್ ಹಾಗೂ ಡಿ ಗ್ರಾಂಡ್ ಹೋಮ್ ಬಲವೂ ತಂಡಕ್ಕಿದೆ. ಮೇಲ್ನೋಟಕ್ಕೆ ನ್ಯೂಜಿಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಿ ತೋರುತ್ತಿದೆ.  

ಸ್ಥಳ: ಬರ್ಮಿಂಗ್‌ಹ್ಯಾಂ
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1