ಬ್ರಿಸ್ಟಾಲ್[ಜೂ.11]: ನಿರಂತರವಾಗಿ ಸುರಿದ ಮಳೆಯಿಂದಾಗಿ ಬಾಂಗ್ಲಾದೇಶ-ಶ್ರೀಲಂಕಾ ನಡುವಿನ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿದೆ. ಉಭಯ ತಂಡಗಳು ಒಂದೊಂದು ಅಂಕ ಹಂಚಿಕೊಂಡಿವೆ.

ಎರಡು ತಂಡಗಳ ಪಾಲಿಗೆ ಮಹತ್ವದ ಪಂದ್ಯವೆನಿಸಿದ್ದ ಪಂದ್ಯವೀಗ ಮಳೆಗೆ ಆಹುತಿಯಾಗಿದೆ. ಇದೀಗ ಶ್ರೀಲಂಕಾ 4 ಪಂದ್ಯಗಳನ್ನಾಡಿ 4 ಅಂಕ ಗಳಿಸಿಕೊಂಡರೆ, ಬಾಂಗ್ಲಾದೇಶ 4 ಪಂದ್ಯಗಳನ್ನಾಡಿ 3 ಅಂಕ ಗಳಿಸಿಕೊಂಡಿದೆ. 

ಈ ಮೊದಲು ಪಾಕಿಸ್ತಾನ-ಶ್ರೀಲಂಕಾ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಇನ್ನು ಸೋಮವಾರ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಇದೀಗ 4 ಅಂಕಗಳೊಂದಿಗೆ ಶ್ರೀಲಂಕಾ ಅಂಕಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ.

ಶ್ರೀಲಂಕಾ ತಂಡವು ಜೂನ್ 15ರಂದು ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದರೆ, ಬಾಂಗ್ಲಾದೇಶ ತಂಡವು ಜೂನ್ 17ರಂದು ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ.