ಟೌಂಟನ್(ಜೂ.17): ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿರುವ ಬಾಂಗ್ಲಾದೇಶ ಇದೀಗ ವೆಸ್ಟ್ ಇಂಡೀಸ್ ತಂಡಕ್ಕೂ ಸೋಲಿನ ಶಾಕ್ ನೀಡಿದೆ. ಸೌತ್ ಆಫ್ರಿಕಾಗೆ ಸೋಲುಣಿಸಿ ಸಂಭ್ರಮಿಸಿದ್ದ ಬಾಂಗ್ಲಾದೇಶ, 23ನೇ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿದೆ.

ಗೆಲುವಿಗೆ 322 ರನ್ ಬೃಹತ್ ಟಾರ್ಗೆಟ್ ಪಡೆದ ಬಾಂಗ್ಲಾದೇಶ ದಿಟ್ಟ ಹೋರಾಟ ನೀಡಿತು. ಆರಂಭಿಕರಾದ ತಮಿಮ್ ಇಕ್ಬಾಲ್ ಹಾಗೂ ಸೌಮ್ಯ ಸರ್ಕಾರ್ ಅರ್ಧಶತಕ ಜೊತೆಯಾಟ ನೀಡಿದರು. ಸೌಮ್ಯ ಸರ್ಕಾರ್ 29 ರನ್ ಸಿಡಿಸಿ ಔಟಾದರೆ, ತಮಿಮ್ 48 ರನ್ ಕಾಣಿಕೆ ನೀಡಿದರು.  ಮುಶ್ಫಿಕರ್ ರಹೀಮ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು.

ಶಕೀಬ್ ಅಲ್ ಹಸನ್ ಹಾಗೂ ಲಿಟ್ಟನ್ ದಾಸ್ ಜೊತೆಯಾಟ ಬಾಂಗ್ಲಾದೇಶದ ಗೆಲುವಿನ ಹಾದಿ ಸುಗಮಗೊಳಿಸಿತು. ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಕೀಬ್ ಆಕರ್ಷಕ ಸೆಂಚುರಿ ಸಿಡಿಸಿ ಮಿಂಚಿದರು. ಏಕದಿನ ಕ್ರಿಕೆಟ್‌ನಲ್ಲಿ ಶಕೀಬ್ 10ನೇ ಶತಕ ಪೂರೈಸಿದರು. ಇತ್ತ ಲಿಟ್ಟನ್ ದಾಸ್ ಹಾಫ್ ಸೆಂಚುರಿ ಸಿಡಿಸಿದರು.

ಶಕೀಬ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್ ವಿಂಡೀಸ್ ಗೆಲುವಿನ ಆಸೆಗೆ ತಣ್ಣೀರೆರಚಿತು. ಶಕೀಬ್ ಅಜೇಯ 124 ರನ್ ಹಾಗೂ ಲಿಟ್ಟನ್ ಅಜೇಯ 94 ರನ್ ಸಿಡಿಸಿದರು. ಈ ಮೂಲಕ ಬಾಂಗ್ಲಾದೇಶ 41.3 ಓವರ್‌ಗಳಲ್ಲಿ ವಿಕೆಟ್ 3 ನಷ್ಟಕ್ಕೆ ಗುರಿ ತಲುಪಿತು. 7 ವಿಕೆಟ್ ಗೆಲುವು ಸಾಧಿಸಿದ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ 8ನೇ  ಸ್ಥಾನದಿಂದ 5ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.