ವಿಶ್ವಕಪ್ 2019: ಬಾಂಗ್ಲಾ ವಿರುದ್ಧ ಮುಗ್ಗರಿಸಿದ ಅಫ್ಘಾನಿಸ್ತಾನ!

ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ತಂಡದ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ಅಫ್ಘಾನಿಸ್ತಾನ, ಬಾಂಗ್ಲಾದೇಶ ವಿರುದ್ದವೂ ದಿಟ್ಟ ಹೋರಾಟ ನೀಡಿದೆ. ಆಫ್ಘಾನ್ ಗೆಲುವಿನ ಗಡಿ ದಾಟಲಿಲ್ಲ ಅನ್ನೋ ಕೊರಗು ಬಿಟ್ಟರೆ, ಹೋರಾಟಕ್ಕೆ ಕ್ರಿಕೆಟ್ ದಿಗ್ಗಜರೇ ಸಲಾಂ ಹೇಳಿದ್ದಾರೆ.

World cup 2019 Bangladesh beat afghanistan by 62 runs

ಸೌಥಾಂಪ್ಟನ್(ಜೂ.23): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವಿರುದ್ಧ ದಿಟ್ಟ ಹೋರಾಟ ನೀಡಿ ಸೋತಿದ್ದ ಆಫ್ಘಾನಿಸ್ತಾನ ಇದೀಗ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿದೆ. ಅಫ್ಘಾನಿಸ್ತಾನ 200 ರನ್‌ಗೆ ಆಲೌಟ್ ಆಗೋ ಮೂಲಕ ಬಾಂಗ್ಲಾಗೆ ಶರಣಾಗಿದೆ. ಇದರೊಂದಿಗೆ ಅಫ್ಘಾನ್ ಸೋಲಿನ ಸಂಖ್ಯೆ 7ಕ್ಕೇರಿದೆ.  ಇತ್ತ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ಗೆಲುವಿಗೆ 263 ರನ್ ಟಾರ್ಗೆಟ್ ಪಡೆದ ಆಫ್ಘಾನಿಸ್ತಾನ ಡೀಸೆಂಟ್ ಆರಂಭ ಪಡೆಯಿತು. ನಾಯಕ ಗುಲ್‌ಬಾದಿನ್ ನೈಬ್ ಹಾಗೂ ರಹಮತ್ ಶಾ 49 ರನ್‌ಗಳ ಜೊತೆಯಾಟ ನೀಡಿದರು. ರಹಮತ್ ಶಾ 24 ರನ್ ಸಿಡಿಸಿ ಔಟಾಗೋ ಮೂಲಕ ಆರಂಭಿಕ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ಹಶ್ಮತುಲ್ಹಾ ಶಾಹಿದಿ 11 ರನ್ ಸಿಡಿಸಿ ನಿರಾಸೆ ಮೂಡಿಸಿದರು.

ಗುಲ್‌ಬಾದಿನ್ 47 ರನ್ ಕಾಣಿಕೆ ನೀಡಿದರು. ಇದರ ಬೆನ್ನಲ್ಲೇ ಮೊಹಮ್ಮದ್ ನಬಿ ಶೂನ್ಯಕ್ಕೆ ಔಟಾದರು. ಇದು ಆಫ್ಘಾನಿಸ್ತಾನ ತಂಡಕ್ಕೆ ತೀವ್ರ ಹೊಡೆತ ನೀಡಿತ್ತು. ನಬಿ ನಿರ್ಗಮನದಿಂದ ಆಫ್ಘನ್ ತಂಡದ ಗೆಲುವಿನ ಹಾದಿ ಮತ್ತಷ್ಟು ಕಠಿಣವಾಯಿತು. ಆಸ್ಗರ್ ಅಫ್ಘನ್ 20 ರನ್ ಸಿಡಿಸಿ ಹೊರನಡೆದರು. ಸಮಿಉಲ್ಲಾ ಶಿನ್ವಾರಿ ಹೋರಾಟ ಮುಂದುವರಿಸಿದರು. 

ಇಕ್ರಮ್ ಅಲಿ ಖಿಲ್ 11 ಹಾಗೂ ನಝಿಬುಲ್ಲಾ ಜರ್ದಾನ್ 23 ರನ್ ಕಾಣಿಕೆ ನೀಡಿದರು. ಬೌಂಡರಿ, ಸಿಕ್ಸರ್ ಮೂಲಕ ನೆರವಾಗುತ್ತಿದ್ದ ರಶೀದ್ ಖಾನ್ ಕೇವಲ 2 ರನ್ ಸಿಡಿಸಿ ಔಟಾದರು.  ದವಲತ್ ಜರ್ದಾನ್, ಮುಜೀಪ್ ಯುಆರ್ ರಹಮಾನ್ ವಿಕೆಟ್ ಪತನದೊಂದಿಗೆ ಆಫ್ಘಾನ್ 47 ಓವರ್‌ಗಳಲ್ಲಿ 200 ರನ್‌ಗೆ ಆಲೌಟ್ ಆಯಿತು. ಶಿನ್ವಾರಿ ಅಜೇಯ 49 ರನ್ ಸಿಡಿಸಿ ಹೋರಾಟ ನೀಡಿದರೂ ಅಫ್ಘಾನಿಸ್ತಾನಕ್ಕೆ ಗೆಲುವು ಸಿಗಲಿಲ್ಲ. ಬಾಂಗ್ಲಾದೇಶ 62 ರನ್ ಗೆಲುವು ಸಾಧಿಸಿತು.  

Latest Videos
Follow Us:
Download App:
  • android
  • ios