ಲಾರ್ಡ್ಸ್(ಜು.05): ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಪಾಕಿಸ್ತಾನ,  ಎದುರಾಳಿ ಬಾಂಗ್ಲಾದೇಶ ವಿರುದ್ಧ ದಿಟ್ಟ ಪ್ರದರ್ಶನ ನೀಡಿದೆ.  ಇಮಾಮ್ ಉಲ್ ಶತಕ, ಬಾಬರ್ ಅಜಮ್ 96 ರನ್ ನೆರವಿನಿಂದ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 315 ರನ್ ಸಿಡಿಸಿದೆ.  ಬೃಹತ್ ಮೊತ್ತ ಪೇರಿಸಿರುವ ಪಾಕಿಸ್ತಾನ ಭರ್ಜರಿ ಗೆಲುವಿನ ಲೆಕ್ಕಾಚಾರದಲ್ಲಿದೆ. ಇನ್ನೂ ಪಾಕಿಸ್ತಾನದ ಸೆಮಿಫೈನಲ್ ಆಸೆ ಜೀವಂತವಾಗಿದೆ.

ಟಾಸ್ ಗೆದ್ದ ಪಾಕಿಸ್ತಾನಕ್ಕೆ ಆರಂಭಿಕ ಮೇಲುಗೈ ಸಿಕ್ಕಿತು. ಆದರೆ ಫಖರ್ ಜಮಾನ್ 13 ರನ್ ಸಿಡಿಸಿ ಔಟಾಗೋ ಮೂಲಕ ನಿರಾಸೆ ಮೂಡಿಸಿದರು. ಇಮಾಮ್ ಉಲ್ ಹಕ್ ಹಾಗೂ ಬಾಬರ್ ಅಜಂ ಪ್ರದರ್ಶನದಿಂದ ಪಾಕಿಸ್ತಾನ ತಿರುಗೇಟು ನೀಡಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಾಬರ್ ಆಜಂ 96 ರನ್ ಸಿಡಿಸಿ ಔಟಾದರು. ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು.

ಇಮಾಮ್ ಉಲ್ ಹಕ್ ಆಕರ್ಷಕ ಸೆಂಚುರಿ ಸಿಡಿಸಿದರು. ಈ ವಿಶ್ವಕಪ್ ಟೂರ್ನಿಯಲ್ಲಿ ಇಮಾಮ್ ಸಿಡಿಸಿದ ಮೊದಲ ಶತಕ ಇದು. ಸೆಂಚುರಿ ಸಿಡಿಸಿದ ಬೆನ್ನಲ್ಲೇ ಇಮಾಮ್ ವಿಕೆಟ್ ಪತನಗೊಂಡಿತು. ಬಾಬರ್ ಹಾಗೂ ಇಮಾಮ್ ವಿಕೆಟ್ ಪತನದ ಬೆನ್ನಲ್ಲೇ ಪಾಕಿಸ್ತಾನ ಕುಸಿತ ಕಂಡಿತು. ಮೊಹಮ್ಮದ್ ಹಫೀಜ್, ಹ್ಯಾರಿಸ್ ಸೊಹೈಲ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು.

ನಾಯಕ ಸರ್ಫರಾಜ್ ಗಾಯಗೊಂಡು ಫೆವಿಲಿಯನ್‌ಗೆ ವಾಪಾಸ್ಸಾದರೆ, ವಹಾಬ್ ರಿಯಾಜ್ ಹಾಗೂ ಶದಾಬ್ ಖಾನ್ ಅಬ್ಬರಿಸಲಿಲ್ಲ. ಇಮಾದ್ ವಾಸೀಂ 43 ರನ್ ಸಿಡಿಸಿ ಔಟಾದರು.  ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ315 ರನ್ ಸಿಡಿಸಿದೆ. ಆದರೆ ಪಾಕಿಸ್ತಾನಕ್ಕೆ ಕನಿಷ್ಠ 308 ರನ್ ಗೆಲುವಿನ ಅಗತ್ಯವಿದೆ. ಹೀಗಾದಲ್ಲಿ ಮಾತ್ರ ಪಾಕಿಸ್ತಾನ, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್ ಪ್ರವೇಶಿಸಲಿದೆ. ಬಾಂಗ್ಲಾದೇಶವನ್ನು 7 ರನ್‌ಗೆ ಆಲೌಟ್ ಮಾಡಿದರೆ ಪಾಕಿಸ್ತಾನಕ್ಕೆ ಸೆಮಿಫೈನಲ್ ಪ್ರವೇಶ ಸಾಧ್ಯವಿದೆ. ಇದು ದುಸ್ಸಾಧ್ಯ ಅಂತ ನಿಮಗೆ ಅನಿಸಿದೆ. ನಮಗೂ ಹಾಗೆ ಅನಿಸಿದೆ.