ಲಂಡನ್‌[ಜೂ.25]: ಹಾಲಿ ವಿಶ್ವ ಚಾಂಪಿಯನ್‌ ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಿನ ವಿಶ್ವಕಪ್‌ ಪಂದ್ಯ ಮಂಗಳವಾರ ಇಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಈ ವಿಶ್ವಕಪ್‌ನ ಬಹು ನಿರೀಕ್ಷಿತ ಪಂದ್ಯವೆನಿಸಿದ್ದು, ಬದ್ಧ ವೈರಿಗಳ ನಡುವೆ ಭಾರಿ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 10 ಅಂಕ ಕಲೆಹಾಕಿರುವ ಆಸೀಸ್‌, ಈ ಪಂದ್ಯದಲ್ಲಿ ಜಯಿಸಿದರೆ ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತವಾಗಲಿದೆ.

ಮತ್ತೊಂದೆಡೆ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಆತಿಥೇಯ ಇಂಗ್ಲೆಂಡ್‌ ಒತ್ತಡದಲ್ಲಿದೆ. ತಂಡಕ್ಕೆ ರೌಂಡ್‌ ರಾಬಿನ್‌ ಹಂತದಲ್ಲಿ 3 ಪಂದ್ಯಗಳು ಬಾಕಿ ಇದ್ದು, ಆಸ್ಪ್ರೇಲಿಯಾ, ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಎದುರಾಗಲಿವೆ. ಕೊನೆ 3 ಪಂದ್ಯಗಳಲ್ಲಿ ಕಠಿಣ ಸವಾಲು ಸ್ವೀಕರಿಸಲಿರುವ ಇಂಗ್ಲೆಂಡ್‌ ತವರಿನ ಪ್ರೇಕ್ಷಕರನ್ನು ರಂಜಿಸುವುದರ ಜತೆಗೆ ಸೆಮೀಸ್‌ ಸ್ಥಾನವನ್ನೂ ಖಚಿತ ಪಡಿಸಿಕೊಳ್ಳಬೇಕಿದೆ.

ಇಂಗ್ಲೆಂಡ್‌ಗೆ ಸ್ಫೋಟಕ ಆರಂಭಿಕ ಜೇಸನ್‌ ರಾಯ್‌ ಅನುಪಸ್ಥಿತಿ ಈ ಪಂದ್ಯದಲ್ಲೂ ಕಾಡಲಿದೆ. ಜೋ ರೂಟ್‌, ನಾಯಕ ಇಯಾನ್‌ ಮಾರ್ಗನ್‌, ಜೋಸ್‌ ಬಟ್ಲರ್‌ ಹಾಗೂ ಜಾನಿ ಬೇರ್‌ಸ್ಟೋವ್‌ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಜೋಫ್ರಾ ಆರ್ಚರ್‌ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದು, ಆಸೀಸ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವುದು ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಡೇವಿಡ್‌ ವಾರ್ನರ್‌ ಅತ್ಯದ್ಭುತ ಲಯದಲ್ಲಿದ್ದು, ರನ್‌ ಹಬ್ಬ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಫಿಂಚ್‌, ಸ್ಮಿತ್‌, ಖವಾಜ ಸ್ಥಿರ ಪ್ರದರ್ಶನ ತೋರುತ್ತಿದ್ದು, ಗ್ಲೆನ್‌ ಮ್ಯಾಕ್ಸ್‌ವೆಲ್‌ ಸ್ಫೋಟಕ ಬ್ಯಾಟಿಂಗ್‌ ನಡೆಸುವ ಮೂಲಕ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ವೇಗಿಗಳಾದ ಸ್ಟಾರ್ಕ್ ಹಾಗೂ ಕಮಿನ್ಸ್‌, ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಒಟ್ಟು ಮುಖಾಮುಖಿ: 147

ಆಸ್ಪ್ರೇಲಿಯಾ: 81

ಇಂಗ್ಲೆಂಡ್‌: 61

ಟೈ: 02

ಫಲಿತಾಂಶವಿಲ್ಲ: 03

ವಿಶ್ವಕಪ್‌ನಲ್ಲಿ ಆಸೀಸ್‌ vs ಇಂಗ್ಲೆಂಡ್‌

ಪಂದ್ಯ: 07

ಆಸ್ಪ್ರೇಲಿಯಾ: 05

ಇಂಗ್ಲೆಂಡ್‌: 02

ಸಂಭವನೀಯ ಆಟಗಾರರ ಪಟ್ಟಿ

ಆಸ್ಪ್ರೇಲಿಯಾ: ವಾರ್ನರ್‌, ಫಿಂಚ್‌(ನಾಯಕ), ಸ್ಮಿತ್‌, ಖವಾಜ, ಮ್ಯಾಕ್ಸ್‌ವೆಲ್‌, ಸ್ಟೋಯ್ನಿಸ್‌, ಕಾರ್ರಿ, ಕೌಲ್ಟರ್‌ನೈಲ್‌, ಕಮಿನ್ಸ್‌, ಸ್ಟಾರ್ಕ್, ಜಂಪಾ.

ಇಂಗ್ಲೆಂಡ್‌: ವಿನ್ಸ್‌, ಬೇರ್‌ಸ್ಟೋವ್‌, ರೂಟ್‌, ಮಾರ್ಗನ್‌(ನಾಯಕ), ಸ್ಟೋಕ್ಸ್‌, ಬಟ್ಲರ್‌, ಅಲಿ, ವೋಕ್ಸ್‌, ರಶೀದ್‌, ಆರ್ಚರ್‌, ಮಾರ್ಕ್ ವುಡ್‌.