ಟೌಂಟನ್(ಜೂ.12): ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಅಬ್ಬರಿಸಿದೆ. ಡೇವಿಡ್ ವಾರ್ನರ್ ಭರ್ಜರಿ ಶತಕ ಹಾಗೂ ನಾಯಕ ಆ್ಯರೋನ್ ಫಿಂಚ್ 82 ರನ್ ನೆರವಿನಿಂದ ಆಸ್ಟ್ರೇಲಿಯಾ 49  ಓವರ್‌ಗಳಲ್ಲಿ 307 ರನ್ ಸಿಡಿಸಿ ಆಲೌಟ್ ಆಗಿದೆ. ಇದೀಗ ಪಾಕಿಸ್ತಾನ ಗೆಲುವಿಗೆ 308 ರನ್ ಸಿಡಿಸಬೇಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ಮೊದಲ ವಿಕೆಟ್‌ಗೆ ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 146 ರನ್ ಜೊತೆಯಾಟ ನೀಡಿತು. ನಾಯಕ ಫಿಂಚ್ 82 ರನ್ ಸಿಡಿಸಿ ಔಟಾದರು. ಇನ್ನು ಸ್ಟೀವ್ ಸ್ಮಿತ್ ಕೇವಲ 10 ರನ್ ಸಿಡಿಸಿ ನಿರಾಸೆ ಅನುಭವಿಸಿದರು.

ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಮಂಕಾದರು. ಆದರೆ ಹೋರಾಟ ನೀಡಿದ ಡೇವಿಡ್ ವಾರ್ನರ್ ಪಾಕಿಸ್ತಾನ ಬೌಲರ್‌ಗಳಿಗೆ ತಲೆನೋವಾದರು. ಅಬ್ಬರಿಸಿದ ವಾರ್ನರ್ ಸೆಂಚುರಿ ಸಿಡಿಸಿದರು. ವಾರ್ನರ್ 111 ಎಸೆತದಲ್ಲಿ 107 ರನ್ ಸಿಡಿಸಿ ಔಟಾದರು. ಇತ್ತ ಉಸ್ಮಾನ್ ಖವಾಜ 18 ರನ್‌ಗೆ ಆಟ ಅಂತ್ಯಗೊಳಿಸಿದರು. ಶಾನ್ ಮಾರ್ಶ್ 23 ರನ್  ಸಿಡಿಸಿ ಔಟಾದರು. 

ನತನ್ ಕೌಲ್ಟರ್ ನೈಲ್ ಹಾಗೂ ಪ್ಯಾಟ್ ಕಮಿನ್ಸ್ ಅಬ್ಬರಿಸಲಿಲ್ಲ. ಅಲೆಕ್ಸ್ ಕ್ಯಾರಿ 20 ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ49 ಓವರ್‌ಗಳಲ್ಲಿ 307 ರನ್‌ಗೆ ಆಲೌಟ್ ಆಯಿತು. ಪಾಕಿಸ್ತಾನ ಪರ ಮೊಹಮ್ಮದ್ ಅಮೀರ್ 5 ವಿಕೆಟ್ ಪಡೆದು ಮಿಂಚಿದರು.