ಲಾರ್ಡ್ಸ್(ಜೂ.25): ವಿಶ್ವಕಪ್ ಸೆಮಿಫೈನಲ್ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಗೆಲುವಿಗಾಗಿ ಕಠಿಣ ಹೋರಾಟ ನಡೆಸುತ್ತಿದೆ. ಇಂಗ್ಲೆಂಡ್ ವಿರುದ್ಧದ 32ನೇ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 285 ರನ್ ಸಿಡಿಸಿದೆ. ಈ ಮೂಲಕ ಇಂಗ್ಲೆಂಡ್‌ಗೆ ಕಠಿಣ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾದ ಎಂದಿನಂತೆ ಉತ್ತಮ ಆರಂಭ ಪಡೆಯಿತು. ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಒಪನಿಂಗ್ ಜೊತೆಯಾಟ ಇಂಗ್ಲೆಂಡ್ ತಂಡದ ಲೆಕ್ಕಾಚಾರ ಉಲ್ಟಾ ಮಾಡಿತು. ಮೊದಲ ವಿಕೆಟ್‌ಗೆ ಈ ಜೋಡಿ 123 ರನ್ ಜೊತೆಯಾಟ ನೀಡಿತು. ವಾರ್ನರ್ 53 ರನ್ ಸಿಡಿಸಿ ಔಟಾದರು.

ಉಸ್ಮಾನ್ ಖವಾಜ ಜೊತೆ ಇನ್ನಿಂಗ್ಸ್ ಮುಂದುವರಿಸಿದ  ಫಿಂಚ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಖವಾಜ 23 ರನ್ ಸಿಡಿಸಿ ಔಟಾದರು. ಫಿಂಚ್ ಆಕರ್ಷಕ ಸೆಂಚುರಿ ಸಿಡಿಸಿದರು. ಶತಕದ ಬೆನ್ನಲ್ಲೇ ಫಿಂಚ್ ವಿಕೆಟ್ ಪತನಗೊಂಡಿತು. ಸ್ಟೀವ್ ಸ್ಮಿತ್ ಇನ್ನಿಂಗ್ಸ್ ಮುಂದುವರಿಸಿದರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಆಟ ನಡೆಯಲಿಲ್ಲ. ಮಾರ್ಕಸ್ ಸ್ಟೊಯ್ನಿಸ್ ರನೌಟ್‌ಗೆ ಬಲಿಯಾದರು.

ಸ್ಟೀವ್ ಸ್ಮಿತ್ 38 ರನ್ ಸಿಡಿಸಿ ಔಟಾದರು. ಪ್ಯಾಟ್ ಕಮಿನ್ಸ್ 1 ರನ್ ಸಿಡಿಸಿ ನಿರ್ಗಮಿಸಿದರು. ಅಲೆಕ್ಸ್ ಕ್ಯಾರಿ ಸಿಡಿಸಿದ ಅಜೇಯ 38 ರನ್ ನೆರವಿನಿಂದ ಆಸ್ಟ್ರೇಲಿಯಾ 7 ವಿಕೆಟ್  ನಷ್ಟಕ್ಕೆ 285 ರನ್ ಸಿಡಿಸಿತು. ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಸ್ಲಾಗ್ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡು 300 ರನ್ ಗಡಿ ದಾಟಲು ಸಾಧ್ಯವಾಗಲಿಲ್ಲ.