ಓವಲ್(ಜೂ.15):  ವಿಶ್ವಕಪ್ ಟೂರ್ನಿಯ 20 ನೇ ಲೀಗ್ ಪಂದ್ಯ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಬೃಹತ್ ಮೊತ್ತ ಚೇಸ್ ಮಾಡಿದ ಶ್ರೀಲಂಕಾ ದಿಟ್ಟ ಹೋರಾಟ ನೀಡಿತು. ಆದರೆ ಗೆಲುವಿನ ಗೆರೆ ದಾಟಲು ಸಾಧ್ಯವಾಗಲಿಲ್ಲ. ಲಂಕಾ ತಂಡವನ್ನು 247 ರನ್‌ಗೆ ಕಟ್ಟಿಹಾಕಿದ ಆಸ್ಟ್ರೇಲಿಯಾ 87 ರನ್ ಗೆಲುವು ಸಾಧಿಸಿತು. ಈ ಮೂಲಕ ಆಸ್ಟ್ರೇಲಿಯಾ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. 

ಗೆಲುವಿಗೆ 335 ರನ್ ಟಾರ್ಗೆಟ್ ಪಡೆದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು. ನಾಯಕ ದಿಮುತ್ ಕರುಣಾರತ್ನೆ ಹಾಗೂ ಕುಸಾಲ್ ಪರೇರಾ ಮೊದಲ ವಿಕೆಟ್‌ಗೆ 115 ರನ್ ಜೊತೆಯಾಟ ನೀಡಿದರು. ಕುಸಾಲ್ ಪರೇರಾ 52 ರನ್ ಸಿಡಿಸಿ ಔಟಾದರು. ಆದರೆ ಕರುಣಾರತ್ನೆ ಹೋರಾಟ ಮುಂದುವರಿಸಿದರು. 

ಲಹೀರು ತಿರಿಮನ್ನೆ 16 ರನ್ ಸಿಡಿಸಿ ಔಟಾದರು. ಇತ್ತ ಅದ್ಭುತ ಪ್ರದರ್ಶನ ನೀಡಿದ ಕರುಣಾರತ್ನೆ 97 ರನ್ ಸಿಡಿಸಿ ಔಟಾದರು. ಕೇವಲ 3 ರನ್‌ಗಳಿಂದ ಶತಕ ವಂಚಿತರಾದರು. ಕರುಣಾರತ್ನೆ ವಿಕೆಟ್ ಪತನದೊಂದಿದೆ ಲಂಕಾ ಕುಸಿತ ಕಂಡಿತು. ಕುಸಾಲ್ ಮೆಂಡೀಸ್ ತಿರುಗೇಟು ನೀಡೋ ಪ್ರಯತ್ನ ಮಾಡಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ಸಾಥ್ ಸಿಗಲಿಲ್ಲ.

ಕುಸಾಲ್ ಮೆಂಡೀಸ್ 30 ರನ್ ಸಿಡಿಸಿ ಔಟಾದರು. ಶ್ರೀಲಂಕಾ 45.5 ಓವರ್‌ಗಳಲ್ಲಿ 247 ರನ್‌ಗೆ ಆಲೌಟ್ ಆಯಿತು. ಮಿಚೆಲ್ ಸ್ಟಾರ್ಕ್ 4, ಕೇನ್ ರಿಚರ್ಡನ್ಸ್ 3 ವಿಕೆಟ್ ಕಬಳಿಸಿ ಮಿಂಚಿದರು. ಲಂಕಾ ವಿರುದ್ಧ 87 ರನ್ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.