ಟೌಂಟನ್(ಜೂ.12): ಪಾಕಿಸ್ತಾನ ತಂಡ ಎದುರಿಸಲು ಎಲ್ಲಾ ತಂಡಗಳಿಗೆ ಭಯ ಎಂದು ನಾಯಕ ಸರ್ಫರಾಜ್ ಅಹಮ್ಮದ್ ನೀಡಿದ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನ ಸೋಲಿಗೆ ಶರಣಾಗಿದೆ. ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಸೋಲಿನ ಕಹಿ ಅನುಭವಿಸಿದೆ. ಡೇವಿಡ್ ವಾರ್ನರ್ ಶತಕ , ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಬೌಲಿಂಗ್ ದಾಳಿಯಿಂದ ಆಸ್ಟ್ರೇಲಿಯಾ 41 ರನ್ ಗೆಲುವು ಸಾಧಿಸಿದೆ.

308 ರನ್ ಟಾರ್ಗೆಟ್ ಪೆಡದ  ಪಾಕಿಸ್ತಾನ ಆರಂಭದಲ್ಲೇ ಫಕಾರ್ ಜಮಾನ್ ವಿಕೆಟ್ ಕಳೆದುಕೊಂಡಿತು. ಫಕಾರ್ ಶೂನ್ಯ ಸುತ್ತಿದರು. ಇಮಾಮ್ ಉಲ್ ಹಕ್ ಹಾಗೂ ಬಾಬರ್ ಅಜಮ್ 54 ರನ್ ಜೊತೆಯಾಟ ನೀಡೋ ಮೂಲಕ ಪಾಕ್ ತಂಡಕ್ಕೇ ಚೇತರಿಕೆ ನೀಡಿದರು. ಬಾಬರ್ 30 ರನ್ ಸಿಡಿಸಿ ಔಟಾದರು. ಆದರೆ ಇಮಾಮ್ ಹಾಫ್ ಸೆಂಚುರಿ ಭಾರಿಸಿದರು.

ಇಮಾಮ್ 53 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಮೊಹಮ್ಮದ್ ಹಫೀಜ್ 46 ರನ್ ಕಾಣಿಕೆ ನೀಡೋ ಮೂಲಕ ಪಾಕಿಸ್ತಾನ ದಿಟ್ಟ ಹೋರಾಟ ನೀಡೋ ಸೂಚನೆ ನೀಡಿತು. ಆದರೆ ಶೋಯಿಬ್ ಮಲ್ಲಿಕ್ ಶೂನ್ಯಕ್ಕೆ ಔಟಾಗೋ ಮೂಲಕ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿತು. ಆಸಿಫ್ ಆಲಿ ಕೂಡ ನೆರವಾಗಲಿಲ್ಲ. ಆದರೆ ಹಸನ್ ಆಲಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 15 ಎಸೆತದಲ್ಲಿ 32 ರನ್ ಸಿಡಿಸಿ ಔಟಾದರು.

ನಾಯಕ ಸರ್ಫರಾಜ್ ಅಹಮ್ಮದ್ ಹಾಗೂ ವಹಾಬ್ ರಿಯಾಝ್ ಹೋರಾಟ ಪಾಕಿಸ್ತಾನ ತಂಡದಲ್ಲಿ ಮತ್ತೆ ಗೆಲವಿನ ಆಸೆ ಚಿಗುರಿಸಿತು. ಇತ್ತ ಆಸ್ಟ್ರೇಲಿಯಾ ಒತ್ತಡಕ್ಕೆ ಸಿಲುಕಿತು. ರಿಯಾಝ್ 38 ಎಸೆತದಲ್ಲಿ 45 ರನ್ ಸಿಡಿಸಿ ಔಟಾದರು. ಈ ಮೂಲಕ ಸರ್ಫರಾಜ್ ಹಾಗೂ ವಹಾಬ್ 64 ರನ್ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ವಹಾಬ್ ಬೆನ್ನಲ್ಲೇ ಮೊಹಮ್ಮದ್  ಅಮೀರ್ ವಿಕೆಟ್ ಪತನಗೊಂಡಿತು.40 ರನ್ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಸರ್ಫರಾಜ್ ಅಹಮ್ಮದ್ ರನೌಟ್ ಆಗೋ ಮೂಲಕ ಪಾಕಿಸ್ತಾನ 45.4 ಓವರ್‌ಗಳಲ್ಲಿ 266 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ 41 ರನ್ ಗೆಲುವು ಸಾಧಿಸಿತು.