ನಾಟಿಂಗ್‌ಹ್ಯಾಮ್(ಜೂ.20): ವಿಶ್ವಕಪ್ ಲೀಗ್ ಟೂರ್ನಿ ಹೋರಾಟ ದಿನದಿಂದ ದಿನಕ್ಕೆ ರೋಚಕ ಘಟ್ಟ ತಲುಪುತ್ತಿದೆ. ಸೌತ್ ಆಫ್ರಿಕಾ ಮಣಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದ ನ್ಯೂಜಿಲೆಂಡ್ ಇದೀಗ 2ನೇ ಸ್ಛಾನಕ್ಕೆ ಜಾರಿದೆ. ಕಾರಣ ಬಾಂಗ್ಲಾದೇಶ ವಿರುದ್ದ 48  ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಇದೀಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

382 ರನ್ ಟಾರ್ಗೆಟ್ ಪಡೆದ ಬಾಂಗ್ಲಾದೇಶ ದಿಟ್ಟ ಹೋರಾಟ ನೀಡಿತು. ಆರಂಭದಲ್ಲೇ ಸೌಮ್ಯ ಸರ್ಕಾರ್ ವಿಕೆಟ್ ಪತನಗೊಂಡರೂ ಬಾಂಗ್ಲಾ ಆತಂಕಕ್ಕೆ ಒಳಗಾಗಲಿಲ್ಲ. ತಮೀಮ್ ಇಕ್ಬಾಲ್ ಹಾಗೂ ಶಕೀಬ್ ಅಲ್ ಹಸನ್ ಹೋರಾಟದಿಂದ ಬಾಂಗ್ಲಾ ಚೇತರಿಕೆ ಕಂಡಿತು. ಶಕೀಬ್ 41 ರನ್ ಸಿಡಿಸಿ ಔಟಾದರು.

ತಮೀಮ್ ಇಕ್ಬಾಲ್ 62 ರನ್ ಸಿಡಿಸಿ ಔಟಾದರು. ಆದರೆ ಮುಶ್ಫಿಕರ್ ರಹೀಮ್ ಹೋರಾಟ ಮುಂದುವರಿಸಿದರು. ಲಿಟ್ಟನ್ ದಾಸ್ 20 ರನ್ ಸಿಡಿಸಿ ನಿರ್ಗಮಿಸಿದರು. ಮೊಹಮ್ಮದುಲ್ಲಾ ಹಾಗೂ ಮುಶ್ಫಿಕರ್ ಜೊತೆಯಾಟ ಬಾಂಗ್ಲಾ ತಂಡಕ್ಕೆ ನೆರವಾಯಿತು.  ಮೊಹಮ್ಮದುಲ್ಲಾ 69 ರನ್ ಸಿಡಿಸಿ ಔಟಾದರು.

ಸಬ್ಬೀರ್ ರಹಮಾನ್ ಹಾಗೂ ಮೆಹದಿ ಹಸನ್ ಬಹುಬೇಗನೆ ಔಟಾದರು. ಆದರೆ ಅದ್ಭುತ ಹೋರಾಟ ನೀಡಿದ  ಮುಶ್ಫಿಕರ್ ರಹೀಮ್ ಸೆಂಚುರಿ ಸಿಡಿಸಿದರು. ರಹೀಮ್ ಶತಕ ಸಿಡಿಸಿ ಹೋರಾಟ ನೀಡಿದರೂ ಬಾಂಗ್ಲಾಗೆ ಗೆಲುವು ಸಿಗಲಿಲ್ಲ. ರಹೀಮ್ ಅಜೇಯ 102 ರನ್ ಸಿಡಿಸಿದರು. ಬಾಂಗ್ಲಾದೇಶ 8  ವಿಕೆಟ್ ನಷ್ಟಕ್ಕೆ 333 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಇತ್ತ 48 ರನ್ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.