ಲಂಡನ್‌: ಸತತ 2 ಪಂದ್ಯಗಳು ಮಳೆಗೆ ಬಲಿಯಾಗಿದ್ದರಿಂದ ಹತಾಶೆಗೊಳಗಾಗಿರುವ ಶ್ರೀಲಂಕಾ, ಶನಿವಾರ ಹಾಲಿ ವಿಶ್ವ ಚಾಂಪಿಯನ್‌ ಆಸ್ಪ್ರೇಲಿಯಾ ವಿರುದ್ಧ ಅಬ್ಬರಿಸಲು ಕಾತರಿಸುತ್ತದೆ. ಆದರೆ ಬಲಿಷ್ಠ ಕಾಂಗರೂ ಪಡೆಯ ಎದುರು ಗೆಲುವು ಸಾಧಿಸುವುದು ಲಂಕಾಕ್ಕೆ ಅಂದುಕೊಂಡಷ್ಟು ಸುಲಭವಿಲ್ಲ. ಇಲ್ಲಿನ ಓವಲ್‌ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಲಂಕಾಕ್ಕೆ ಡೇವಿಡ್‌ ವಾರ್ನರ್‌ ಭೀತಿ ಶುರುವಾಗಿದೆ.

ಶ್ರೀಲಂಕಾ ತಂಡ ಈ ವಿಶ್ವಕಪ್‌ನಲ್ಲಿ ಜೂ.4ರ ಬಳಿಕ ಪಂದ್ಯವನ್ನಾಡಿಲ್ಲ. ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಬರೋಬ್ಬರಿ 10 ದಿನಗಳ ವಿಶ್ರಾಂತಿ ಬಳಿಕ ಲಂಕಾ ಮೈದಾನಕ್ಕಿಳಿಯಲಿದೆ. ಆಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿದ್ದನ್ನು ಹೊರತುಪಡಿಸಿದರೆ ಲಂಕಾ ತಂಡದಿಂದ ಹೇಳಿಕೊಳ್ಳುವ ಪ್ರದರ್ಶನವೇನೂ ಮೂಡಿಬಂದಿಲ್ಲ. ಮತ್ತೊಂದೆಡೆ ಆಸ್ಪ್ರೇಲಿಯಾ ತನ್ನ ಕಳೆದ ಪಂದ್ಯದಲ್ಲಿ ಭಾರತ ವಿರುದ್ಧ ಸೋಲುಂಡರೂ, ಪಾಕಿಸ್ತಾನ ವಿರುದ್ಧ ಗೆದ್ದು, ಜಯದ ಹಳಿಗೆ ಮರಳಿತ್ತು. 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಫಿಂಚ್ ಪಡೆ ಉತ್ತಮ ಲಯ ಕಾಯ್ದುಕೊಂಡಿದೆ. ಡೇವಿಡ್‌ ವಾರ್ನರ್‌ ಈಗಾಗಲೇ ಒಂದು ಶತಕ ಹಾಗೂ ಅರ್ಧಶತಕ ಬಾರಿಸಿದ್ದು ಲಂಕಾ ಬೌಲರ್‌ಗಳ ಮೇಲೆ ಸವಾರಿ ಮಾಡಲು ಕಾಯುತ್ತಿದ್ದಾರೆ.

ಆಸ್ಪ್ರೇಲಿಯಾದ ಬಲಿಷ್ಠ ಬೌಲಿಂಗ್‌ ಎದುರು ಲಂಕಾ ಬ್ಯಾಟ್ಸ್‌ಮನ್‌ಗಳು ಪರದಾಡಿದರೆ ಅಚ್ಚರಿಯಿಲ್ಲ. ನ್ಯೂಜಿಲೆಂಡ್‌ ಹಾಗೂ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಲಂಕಾ ಬ್ಯಾಟ್ಸ್‌ಮನ್‌ಗಳು 50 ಓವರ್‌ ಪೂರ್ಣಗೊಳಿಸಲು ವಿಫಲರಾಗಿದ್ದರು. ಕಿವೀಸ್‌ ವಿರುದ್ಧ 14 ರನ್‌ ಅಂತರದಲ್ಲಿ 5 ವಿಕೆಟ್‌ ಕಳೆದುಕೊಂಡಿದ್ದ ಲಂಕಾ, ಆಫ್ಘಾನಿಸ್ತಾನ ವಿರುದ್ಧ 36 ರನ್‌ಗೆ 7 ವಿಕೆಟ್‌ ಕಳೆದುಕೊಂಡಿತ್ತು. ತಮ್ಮ ನಡುವೆ ಈಗಾಗಲೇ 9 ವಿಕೆಟ್‌ ಕಬಳಿಸಿರುವ ಮಿಚೆಲ್‌ ಸ್ಟಾರ್ಕ್ ಹಾಗೂ ಪ್ಯಾಟ್‌ ಕಮಿನ್ಸ್‌ರನ್ನು ಎದುರಿಸುವುದು ಲಂಕಾ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಪಿಚ್‌ ರಿಪೋರ್ಟ್‌

ಓವಲ್‌ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ ಸ್ನೇಹಿಯಾಗಿದ್ದು, ಈ ವಿಶ್ವಕಪ್‌ನಲ್ಲಿ ನಡೆದಿರುವ 3 ಪಂದ್ಯಗಳ ಪೈಕಿ 2 ಪಂದ್ಯಗಳ ಎರಡೂ ಇನ್ನಿಂಗ್ಸ್‌ಗಳಲ್ಲಿ 300ಕ್ಕೂ ಹೆಚ್ಚು ರನ್‌ ದಾಖಲಾಗಿದೆ. ವೇಗದ ಬೌಲರ್‌ಗಳಿಗೆ ಪಿಚ್‌ ನೆರವು ನೀಡಲಿದ್ದು, ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ಲಾಭ ಹೆಚ್ಚು.

ವಿಶ್ವಕಪ್‌ನಲ್ಲಿ ಆಸೀಸ್‌ vs ಲಂಕಾ

ಪಂದ್ಯ: 09

ಆಸ್ಪ್ರೇಲಿಯಾ: 07

ಶ್ರೀಲಂಕಾ: 01

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರು

ಆಸ್ಪ್ರೇಲಿಯಾ: ಫಿಂಚ್‌(ನಾಯಕ), ವಾರ್ನರ್‌, ಸ್ಮಿತ್‌, ಮ್ಯಾಕ್ಸ್‌ವೆಲ್‌, ಮಾಷ್‌ರ್‍, ಖವಾಜ, ಕಾರ್ರಿ, ಕೌಲ್ಟರ್‌-ನೈಲ್‌, ಕಮಿನ್ಸ್‌, ಸ್ಟಾರ್ಕ್, ರಿಚರ್ಡ್‌ಸನ್‌.

ಶ್ರೀಲಂಕಾ: ಕರುಣರತ್ನೆ (ನಾಯಕ), ಕುಸಾಲ್‌, ತಿರಿಮನ್ನೆ, ಮೆಂಡಿಸ್‌, ಮ್ಯಾಥ್ಯೂಸ್‌, ಧನಂಜಯ, ತಿಸಾರ, ಉಡಾನ, ಲಕ್ಮಲ್‌, ಮಾಲಿಂಗ, ಪ್ರದೀಪ್‌.

ಸ್ಥಳ: ಲಂಡನ್‌
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1