ವಿಶ್ವಕಪ್ ಸೆಮಿಫೈನಲ್ ಪಂದ್ಯ ಹಲವು ತಿರುವು ಪಡೆದುಕೊಳ್ಳುತ್ತಿದೆ. ಮೊದಲ ಸೆಮಿಫೈನಲ್ ಪಂದ್ಯದಂತೆ 2ನೇ ಪಂದ್ಯ ಕೂಡ ರೋಚಕತೆ ಹುಟ್ಟುಹಾಕಿದೆ. ಇಂಗ್ಲೆಂಡ್ ವಿರುದ್ಧ ದಿಡೀರ್ ಕುಸಿತ ಅನುಭವಿಸಿದರೂ, ಸ್ಟೀವ್ ಸ್ಮಿತ್ ಹೋರಾಟದಿಂದ ಆಸೀಸ್ 223 ರನ್ ಸಿಡಿಸಿದೆ.
ಬರ್ಮಿಂಗ್‌ಹ್ಯಾಮ್(ಜು.11): ವಿಶ್ವಕಪ್ ಟೂರ್ನಿ 2ನೇ ಸೆಮಿಫೈನಲ್ ಪಂದ್ಯ ಆರಂಭದಲ್ಲೇ ಕುತೂಹಲಕ್ಕೆ ಕಾರಣವಾಗಿದೆ. ಬೃಹತ್ ಮೊತ್ತದ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ ಇಂಗ್ಲೆಂಡ್ ಶಾಕ್ ನೀಡಿದೆ. ಆದರೆ ಸ್ಟೀವ್ ಸ್ಮಿತ್ ಏಕಾಂಗಿ ಹೋರಾಟದಿಂದ ಆಸ್ಟ್ರೇಲಿಯಾ 223 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಸ್ಪರ್ಧಾತ್ಮಕ ಮೊತ್ತ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸೀಸ್ ತಂಡಕ್ಕೆ, ಕ್ರಿಸ್ ವೋಕ್ಸ್ ಹಾಗೂ ಜೋಫ್ರಾ ಆರ್ಚರ್ ಶಾಕ್ ನೀಡಿದರು. ನಾಯಕ ಆರೋನ್ ಫಿಂಚ್, ಡೇವಿಡ್ ವಾರ್ನರ್ ಹಾಗೂ ಪೀಟರ್ ಹ್ಯಾಂಡ್ಸ್‌ಕಾಂಬ್ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. 14 ರನ್‌ಗೆ 3 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ಅಲ್ಪಮೊತ್ತಕ್ಕೆ ಕುಸಿಯೋ ಭೀತಿ ಎದುರಿಸಿತು. ಸ್ಟೀವ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ ಹೋರಾಟದಿಂದ ಆಸ್ಟ್ರೇಲಿಯಾ ಉಸಿರಾಡಿತು.
ಅಲೆಕ್ಸ್ 46 ರನ್ ಸಿಡಿಸಿ ಔಟಾದರು. ಆದರೆ ಸ್ಮಿತ್ ಹೋರಾಟ ಮುಂದುವರಿಸಿದರು. ಮಾರ್ಕಸ್ ಸ್ಟೊಯ್ನಿಸ್ ಶೂನ್ಯ, ಗ್ಲೆನ್ ಮ್ಯಾಕ್ಸ್‌ವೆಲ್ 22 ರನ್ ಸಿಡಿಸಿ ಔಟಾದರು. ಪ್ಯಾಟ್ ಕಮಿನ್ಸ್ ಕೂಡ ಆಸರೆಯಾಗಲಿಲ್ಲ. ಸ್ಮಿತ್‌ಗೆ ಮಿಚೆಲ್ ಸ್ಟಾರ್ಕ್ ಉತ್ತಮ ಸಾಥ್ ನೀಡಿದರು. ಏಕಾಂಗಿ ಹೋರಾಟ ನೀಡಿದ 85 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಜಾಸನ್ ಬೆಹೆನ್‍ಡ್ರೂಫ್ ವಿಕೆಟ್ ಪತನದೊಂದಿಗೆ ಆಸ್ಟ್ರೇಲಿಯಾ 49 ಓವರ್‌ಗಳಲ್ಲಿ 223 ರನ್‌ಗೆ ಆಲೌಟ್ ಆಯಿತು.
