ಧವನ್‌ಗೆ ಗಾಯ; ಮತ್ತೋರ್ವ ಡೆಲ್ಲಿ ಕ್ರಿಕೆಟಿಗನಿಗೆ ಹೊಡಿತು ಜಾಕ್‌ಪಾಟ್
ವಿಶ್ವಕಪ್ ಟೂರ್ನಿಯಲ್ಲಿ ಗಾಯಕ್ಕೆ ತುತ್ತಾಗಿರುವ ಡೆಲ್ಲಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಬದಲಿಗೆ ಮೀಸಲು ಆಟಗಾರನಾಗಿ ಮತ್ತೋರ್ವ ಡೆಲ್ಲಿ ಕ್ರಿಕೆಟಿಗನಿಗೆ ಬುಲಾವ್ ಬಂದಿದೆ.
ನಾಟಿಂಗ್‌ಹ್ಯಾಮ್[ಜೂ.13]: ಗಾಯಾಳು ಶಿಖರ್ ಧವನ್‌ಗೆ ಸಂಪೂರ್ಣ ಗುಣಮುಖರಾಗಲು 10 ರಿಂದ 12 ದಿನಗಳ ಸಮಯ ನೀಡಿರುವ ಭಾರತ ತಂಡದ ಆಡಳಿತ, ಅವಶ್ಯಕತೆ ಬಿದ್ದರೆ ಅವರ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲು ಸುಲಭವಾಗಲಿ ಎನ್ನುವ ಕಾರಣಕ್ಕೆ, ಮೀಸಲು ಆಟಗಾರನನ್ನಾಗಿ ಯುವ ವಿಕೆಟ್ ಕೀಪರ್ ರಿಷಭ್ ಪಂತ್‌ರನ್ನು ಇಂಗ್ಲೆಂಡ್‌ಗೆ ಕರೆಸಿಕೊಳ್ಳುತ್ತಿದೆ.
ಪಂತ್ ಇಂಗ್ಲೆಂಡ್‌ಗೆ ಪ್ರಯಾಣಿಸಲು ಸಿದ್ಧಗೊಳ್ಳುತ್ತಿದ್ದು, ಜೂ.16ರ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಮ್ಯಾಂಚೆಸ್ಟರ್ ತಲುಪಲಿದ್ದಾರೆ. ಏಪ್ರಿಲ್‌ನಲ್ಲಿ ವಿಶ್ವಕಪ್‌ಗೆ ಬಿಸಿಸಿಐ ತಂಡ ಪ್ರಕಟಿಸಿದ್ದಾಗ ಪಂತ್‌ರನ್ನು ಆಯ್ಕೆ ಮಾಡದ್ದಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು. ಇದೀಗ ಪಂತ್‌ಗೆ ಬುಲಾವ್ ಬಂದಿದ್ದು, ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆ ಇದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ಸಹಾಯಕ ಕೋಚ್ ಸಂಜಯ್ ಬಾಂಗರ್, ‘ಧವನ್ ಗಾಯದಿಂದ ಗುಣಮುಖರಾಗಲು ಸ್ವಲ್ಪ ಸಮಯ ಹಿಡಿಯಲಿದೆ. 10 ರಿಂದ 12 ದಿನಗಳಲ್ಲಿ ಅವರು ಆಡಲು ಸಿದ್ಧರಿದ್ದಾರೆಯೇ ಎನ್ನುವುದು ತಿಳಿಯಲಿದೆ. ಅವರೊಬ್ಬ ಅತಿಮುಖ್ಯ ಆಟಗಾರ. ಹೀಗಾಗಿ ತಂಡದಿಂದ ಹೊರಬೀಳುವುದನ್ನು ನಾವು ಇಷ್ಟಪಡುವುದಿಲ್ಲ. ಒಂದೊಮ್ಮೆ ಬದಲಿ ಆಟಗಾರನಿಗಾಗಿ ಐಸಿಸಿ ಬಳಿ ಮನವಿ ಸಲ್ಲಿಸಬೇಕಾದ ಪರಿಸ್ಥಿತಿ ಎದುರಾದರೆ, ಆಗ ಆಟಗಾರನಿಗಾಗಿ ಹುಡುಕಾಟ ನಡೆಸುವುದು ಸರಿಯಲ್ಲ. ಹೀಗಾಗಿ ಪಂತ್‌ರನ್ನು ಇಂಗ್ಲೆಂಡ್‌ಗೆ ಕರೆಸಿಕೊಂಡು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಅವಕಾಶ ನೀಡಲಾಗುತ್ತಿದೆ’ ಎಂದರು.
ಬಾಂಗರ್ ಮಾತಿನ ಪ್ರಕಾರ ಧವನ್, ನ್ಯೂಜಿಲೆಂಡ್, ಪಾಕಿಸ್ತಾನ (ಜೂ.16), ಆಫ್ಘಾನಿಸ್ತಾನ (ಜೂ.22) ಹಾಗೂ ವೆಸ್ಟ್‌ಇಂಡೀಸ್ (ಜೂ.27) ವಿರುದ್ಧದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಮ್ಯಾಂಚೆಸ್ಟರ್ ತಲುಪಲಿರುವ ಪಂತ್, ತಂಡದೊಂದಿಗೆ ಅಭ್ಯಾಸ ನಡೆಸಲಿದ್ದಾರೆ. ಆದರೆ ಮೀಸಲು ಆಟಗಾರನಾಗಿರುವ ಕಾರಣ, ಪಂದ್ಯದ ದಿನದಂದು ತಂಡದ ಬಸ್‌ನಲ್ಲಿ ಪ್ರಯಾಣಿಸಲು, ಡ್ರೆಸ್ಸಿಂಗ್ ಕೊಠಡಿ ಪ್ರವೇಶಿಸಲು ಅನುಮತಿ ಇರುವುದಿಲ್ಲ.