ಲಂಡನ್(ಜೂ.25): ಇಂಗ್ಲೆಂಡ್ ನಾಡಿನಲ್ಲಿ ವಿಶ್ವಕಪ್ ಆಡುತ್ತಿರುವ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶದ ಹಾದಿಯಲ್ಲಿದೆ. ವಿರಾಟ್ ಕೊಹ್ಲಿ ಸೈನ್ಯ ಉತ್ತಮ ಪ್ರದರ್ಶನದ ಮೂಲಕ ಮುನ್ನುಗ್ಗುತ್ತಿದೆ. ಇದೀಗ ಕೊಹ್ಲಿ ಸೈನ್ಯಕ್ಕೆ 1983ರ ವಿಶ್ವಕಪ್ ಕೂಡ ಸ್ಪೂರ್ತಿ ನೀಡಲಿದೆ. ಕಾರಣ, 1983ರ ಇದೇ ದಿನ ಕಪಿಲ್ ದೇವ್ ನೇತೃತ್ವದ  ಟೀಂ ಇಂಡಿಯಾ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ಬರೆದಿತ್ತು.

ಇದನ್ನೂ ಓದಿ: ವಿಶ್ವಕಪ್ 2019: RCB ಬೌಲರ್‌ಗೆ ಜಾಕ್‌ಪಾಟ್ : ಟೀಂ ಇಂಡಿಯಾದಿಂದ ಬುಲಾವ್

ಜೂನ್ 25, 1983. ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೃಷ್ಣಮಾಚಾರಿ ಶ್ರೀಕಾಂತ್ 38, ಮೊಹಿಂದರ್ ಅಮರನಾಥ್ 26 ಹಾಗೂ ಸಂದೀಪ್ ಪಾಟಿಲ್ 27 ರನ್ ಸಿಡಿಸಿದ್ದರು. ಇತರರಿಂದ ರನ್ ಹರಿದುಬರಲಿಲ್ಲ. ಹೀಗಾಗಿ ಭಾರತ 183 ರನ್‌ಗೆ ಆಲೌಟ್ ಆಗಿತ್ತು.

ಇದನ್ನೂ ಓದಿ: ಆಫ್ಘನ್,ಆಫ್ರಿಕಾ ಬಿಟ್ಟು ಉಳಿದ 8 ತಂಡಗಳಿಗೂ ಇದೆ ಸೆಮೀಸ್ ಚಾನ್ಸ್!

ಸುಲಭ ಗುರಿ ಚೇಸ್ ಮಾಡಲು ಕಣಕ್ಕಿಳಿದ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತೀಯ ಬೌಲರ್‌ಗಳು ಶಾಕ್ ನೀಡಿದ್ದರು. ಗಾರ್ಡನ್ ಗ್ರಿನಿಡ್ಜ್, ಡೆಸ್ಮೆಂಡ್ ಹೆಯೆನ್ಸ್, ವಿವ್ ರಿಚರ್ಡ್ಸ್, ನಾಯಕ ಕ್ಲೈವ್ ಲಾಯ್ದ್ ಸೇರಿದಂತೆ ವೆಸ್ಟ್ ಇಂಡೀಸ್ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಅಬ್ಬರಿಸದೆ ಪೆವಿಲಿಯನ್ ಸೇರಿದರು.

ಮದನ್ ಲಾಲ್, ಮೊಂಹಿದರ್ ಅಮರನಾಥ್ ತಲಾ 3 ವಿಕೆಟ್ ಕಬಳಿಸಿದರೆ, ಬಲ್ವಿಂದರ್ ಸಂಧು 2, ನಾಯಕ ಕಪಿಲ್ ದೇವ್ ಹಾಗೂ ರೋಜರ್ ಬಿನ್ನಿ ತಲಾ 1 ವಿಕೆಟ್ ಕಬಳಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ 140 ರನ್‌ಗೆ ಆಲೌಟ್ ಆಯಿತು. ಭಾರತ 43 ರನ್ ಗೆಲುವು ಸಾಧಿಸಿ ಇತಿಹಾಸ ರಚಿಸಿತು.  ಈ ಐತಿಹಾಸಿಕ ಗೆಲುವಿಗೆ ಇಂದು 36ನೇ ವರ್ಷದ ಸಂಭ್ರಮ.